
ಬೆಂಗಳೂರು: ‘ವೇದಗಳ ಸಾರವೇ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು. ಆದರೆ ಇಂದು ಜನರಿಗೆ ಪ್ರಕೃತಿಗಿಂತ ಕಾಂಕ್ರೀಟ್ ಕಟ್ಟಡಗಳೇ ಸುಂದರವಾಗಿ ಕಾಣುತ್ತಿರುವುದು ವಿಪರ್ಯಾಸದ ಸಂಗತಿ’ ಎಂದು ರಾಜರಾಜೇಶ್ವರಿನಗರದ ಕೈಲಾಸ ಆಶ್ರಮ ಮಹಾಸಂಸ್ಥಾನ ಜಯೀಂದ್ರ ಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕೃಷಿ ಭಾರತ ಫೌಂಡೇಷನ್ ಭಾನುವಾರ ಆಯೋಜಿಸಿದ್ದ ಅ.ನ. ಯಲ್ಲಪ್ಪ ರೆಡ್ಡಿ ಅವರಿಗೆ ಗೌರವಾಭಿನಂದನೆ ಹಾಗೂ ಅವರ ‘ಸಮೃದ್ಧವಾಗಲಿ ಭೂತಾಯ ಒಡಲು’ ಪುಸ್ತಕ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮಗೆಲ್ಲ ಶಿಲ್ಪಕಲೆ ಹಾಗೂ ಕಟ್ಟಡಗಳ ಶೈಲಿಯ ಬಗ್ಗೆ ಗೌರವವಿದೆ. ಆದರೆ ಚಿಟ್ಟೆ, ಬೆಟ್ಟ ಮತ್ತು ನೀರನ್ನು ಅದ್ಭುತವಾಗಿ ಸೃಷ್ಟಿಸಿದ ಆ ಭಗವಂತನಿಗೆ ಎಷ್ಟು ನಮಿಸಿದರೂ ಸಾಲದು. ನಮಗೆಲ್ಲ ನೆರಳು ನೀಡಲು ತಾನು ಬಿಸಿಲಿನಲ್ಲಿ ನಿಲ್ಲುವ ಗುಣ ವೃಕ್ಷದ್ದು. ಅಂತಹ ಪ್ರಕೃತಿಯ ಬಗ್ಗೆ ಅಪಾರ ಕಾಳಜಿ ವಹಿಸಿ, ಪರಿಸರಕ್ಕಾಗಿಯೇ ಜೀವನವನ್ನು ಮುಡುಪಾಗಿಟ್ಟಿರುವ ಯಲ್ಲಪ್ಪ ರೆಡ್ಡಿ ಅವರ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ‘ಸರ್ಕಾರದ ಎರಡು ಪ್ರಮುಖ ಇಲಾಖೆಗಳಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಅರಣ್ಯವನ್ನು ಸಂರಕ್ಷಿಸುವ ಕಾವಲುಗಾರರಂತೆ ಕಾರ್ಯನಿರ್ವಹಿಸಬೇಕು. ಆದರೆ ದುರಾದೃಷ್ಟವಶಾತ್, ಅವೇ ಇಂದು ದೋಚುವುದು ಹೇಗೆ ಎಂಬುದನ್ನು ಕಲಿಸುತ್ತಿವೆ. ಇಂತಹ ವ್ಯವಸ್ಥೆಯ ನಡುವೆಯೂ ಅರಣ್ಯ ಇಲಾಖೆಯಲ್ಲಿದ್ದುಕೊಂಡು ಯಲ್ಲಪ್ಪ ರೆಡ್ಡಿ ಅವರು ಮಾಡಿದ ಸಾಧನೆ ಅಪೂರ್ವವಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಅ.ನ. ಯಲ್ಲಪ್ಪ ರೆಡ್ಡಿ ಅವರ ಪರಿಸರ ಸೇವೆಯನ್ನು ಸ್ಮರಿಸಿ ಅವರಿಗೆ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು.
ಐಪಿಎಸ್ ಅಧಿಕಾರಿ ಬಿ. ದಯಾನಂದ, ಬೆಂಗಳೂರು ಸೈನ್ಸ್ ಫೋರಂನ ಕಾರ್ಯದರ್ಶಿ ಸುಚರಿತಾ ಚಂದ್ರ ಹಾಗೂ ಲೇಖಕ ನಿರಂಜನ ಪರಾಂಜಪೆ, ಕೃಷಿ ಭಾರತ ಸಂಪಾದಕ ಚಂದ್ರಶೇಖರ ಬಾಳೆ, ಗಾಯಕ ಆನಂದ ಮಾದಲಗೆರೆ, ಟಿ.ಸಿ. ರವೀಂದ್ರ ತುಂಬರಮನೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.