ADVERTISEMENT

ಬೆಂಗಳೂರು: ನ.14ರಿಂದ ವೀರಲೋಕ ಪುಸ್ತಕ ಸಂತೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 18:54 IST
Last Updated 11 ನವೆಂಬರ್ 2025, 18:54 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಬೆಂಗಳೂರು: ವೀರಲೋಕ ಬುಕ್ಸ್ ಆಯೋಜಿಸುತ್ತಿರುವ ಮೂರನೇ ಆವೃತ್ತಿಯ ‘ಪುಸ್ತಕ ಸಂತೆ’ ನ.14ರಿಂದ 16ರವರೆಗೆ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ.

‘ಪ್ರತೀ ಕನ್ನಡಿಗರಿಗೆ ಕನ್ನಡದ ಪುಸ್ತಕಗಳನ್ನು ತಲುಪಿಸಲೆಂದು ಶುರುವಾದ ವೀರಲೋಕ ಬುಕ್ಸ್, ಎರಡು ವರ್ಷದಿಂದ ಪ್ರಕಾಶಕರು-ಲೇಖಕರು-ಓದುಗರನ್ನು ಒಂದೆಡೆ ಸೇರಿಸುವ ಸೇತುವೆಯಾಗಿ 'ಪುಸ್ತಕ ಸಂತೆ' ಎನ್ನುವ ಸಾಹಿತ್ಯ ಸಂತೆಯನ್ನು ಆಯೋಜಿಸುತ್ತಿದೆ. ಈ ಬಾರಿ ಮಳಿಗೆಗಳ ಸಂಖ್ಯೆ 200ಕ್ಕೂ ಅಧಿಕ ಇರಲಿವೆ. ಎರಡು ಲಕ್ಷಕ್ಕೂ ಹೆಚ್ಚು ಓದುಗರು ಬರುವ ನಿರೀಕ್ಷೆಯಿದ್ದು, ಪ್ರಮುಖ ಲೇಖಕರೊಂದಿಗೆ ಮುಖಾಮುಖಿಗೂ ಅವಕಾಶವಿದೆ’ ಎಂದು ವೀರಕಪುತ್ರ ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

‘ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಪುಸ್ತಕ ಸಂತೆಯ ಕಾರ್ಯಕ್ರಮಗಳು ವೈವಿಧ್ಯಮಯವಾಗಿರಲಿವೆ. ಓದುಗ– ಲೇಖಕರ ಸಂವಾದ, 22 ಲೇಖಕರ ಪುಸ್ತಕ ಜನಾರ್ಪಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಆಹಾರ, ಆರೋಗ್ಯ ಮೇಳದ ಜತೆಗೆ ನಟ–ನಟಿಯರ ತಾರಾ ಮೇಳವೂ ಇರಲಿವೆ. ಮೂರು ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರಾಮಾಯಣ ದರ್ಶನಂ ನಾಟಕ, ಯಕ್ಷಗಾನವೂ ವಿಶೇಷ ಆಕರ್ಷಣೆಯಾಗಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.14ರ ಸಂಜೆ 5ಕ್ಕೆ ಪುಸ್ತಕ ಸಂತೆ ಉದ್ಘಾಟಿಸುವರು. ಸಚಿವರಾದ ಡಾ.ಎಂ.ಸಿ.ಸುಧಾಕರ್‌, ಮಧು ಬಂಗಾರಪ್ಪ, ರಾಮಲಿಂಗಾರೆಡ್ಡಿ ಅವರೂ ಭಾಗಿಯಾಗುವರು. ಮೂರು ದಿನವೂ ವಿವಿಧ ವಿಚಾರದಲ್ಲಿ ಸಂಕಿರಣ ನಡೆಯಲಿವೆ’ ಎಂದು ಹೇಳಿದರು.

ಮಕ್ಕಳನ್ನು ಸೆಳೆಯಲು ನಾನಾ ಚಟುವಟಿಕೆ ಜತೆಗೆ ಸ್ಪರ್ಧೆಗಳನ್ನು ರೂಪಿಸಲಾಗುತ್ತಿದೆ. ಪೋಷಕರು ಈ ವಾರಾಂತ್ಯದಲ್ಲಿ ಮಾಲ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಬದಲು ಪುಸ್ತಕ ಸಂತೆಗೆ ಬಂದರೆ ಇಲ್ಲಿಯೇ ಖರೀದಿಗೆ ಅವಕಾಶವಿದ್ದು, ಪುಸ್ತಕಗಳ ಅರಿವಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಮಾಜಿ ಸಂಸದ ಉಗ್ರಪ್ಪ, ಲೇಖಕ ಎಸ್.ದಿವಾಕರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.