ADVERTISEMENT

ನೆಲಕಚ್ಚಿದ ತರಕಾರಿ ದರ– ಹಣ್ಣಿನ ದರ ಸ್ಥಿರ

₹100ಕ್ಕೆ ಆರು ಬಗೆಯ ತರಕಾರಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:43 IST
Last Updated 2 ಮಾರ್ಚ್ 2020, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿವರಾತ್ರಿ ಕಳೆದ ಬೆನ್ನಲ್ಲೇ ತರಕಾರಿ ದರಗಳು ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ₹ 100 ರೂಪಾಯಿಗೆ ಆರು ಬಗೆಯ ತರಕಾರಿ ಖರೀದಿಸಬಹುದಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಲ್ಲಿ ಈ ಬೆಳವಣಿಗೆ ಸಂತಸ ಮೂಡಿಸಿದೆ.

‘ಹಬ್ಬದ ಬಳಿಕ ಹೂವು, ಹಣ್ಣು, ಬೆಲೆ ಕಡಿಮೆಯಾಗುವುದು ಸಾಮಾನ್ಯ. ಆದರೆ, ಈ ಬಾರಿ ಹೂವು– ಹಣ್ಣಿಗಿಂತ ತರಕಾರಿ ದರ ದಿಢೀರ್ ನೆಲಕಚ್ಚಿದೆ’ ಎಂದು ವ್ಯಾಪಾರಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಳೆದ ವಾರದವರೆಗೆ ದುಬಾರಿಯಾಗಿದ್ದ ಬೀನ್ಸ್, ಟೊಮೆಟೊ, ಮೂಲಂಗಿ, ಬದನೆಕಾಯಿ, ಬೆಂಡೆಕಾಯಿ, ಗೋರಿಕಾಯಿ, ಹಸಿ ಮೆಣಸಿನಕಾಯಿ, ಕ್ಯಾರೆಟ್ ಹಾಗೂ ಇನ್ನಿತರ ತರಕಾರಿಗಳ ದರ ಅರ್ಧದಷ್ಟು ಕಡಿಮೆಯಾಗಿದೆ.ಬೆಲೆ ಕಡಿಮೆ ಆದ ಕಾರಣ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಗ್ರಾಹಕರು ಸೋಮವಾರ ಮುಗಿಬಿದ್ದರು. ಕೊತ್ತಂಬರಿ, ಮೆಂತ್ಯೆ, ಪುದೀನ ಸೊಪ್ಪುಗಳು ಪ್ರತಿ ಕಟ್ಟಿಗೆ ತಲಾ ₹10ರಂತೆ ಮಾರಾಟವಾಗುತ್ತಿವೆ.

ADVERTISEMENT

‘ಈ ಹಿಂದೆ ತರಕಾರಿ ದರಗಳ ಏರಿಕೆಯಿಂದ ಲಾಭ ನಿರೀಕ್ಷಿಸಿದ ರೈತರು, ತರಕಾರಿಗಳನ್ನುಹೆಚ್ಚಾಗಿ ಬೆಳೆದಿದ್ದಾರೆ. ಆದರೆ, ಬೇಸಿಗೆಯಲ್ಲಿ ತರಕಾರಿಗಳಿಗೆ ಬೇಡಿಕೆ ಕಡಿಮೆ. ಆದ ಕಾರಣ ಮಾರುಕಟ್ಟೆಗೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದ್ದು, ಬೆಲೆಗಳು ಕಡಿಮೆಯಾಗಿವೆ’ ಎನ್ನುತ್ತಾರೆ ವ್ಯಾಪಾರಿ ಉಮೇಶ್.

‘ಅವರೆಕಾಯಿ ಖರೀದಿಸಲು ಮಾರುಕಟ್ಟೆಗೆ ಬಂದೆ. ಆದರೆ, ತರಕಾರಿ ದರಗಳು ಕಡಿಮೆಯಾಗಿರುವುದನ್ನು ನೋಡಿ ಖುಷಿಯಾಯಿತು. ಹಲವು ತರಕಾರಿಗಳು ಪ್ರತಿ ಕೆ.ಜಿ.ಗೆ ₹20ರಂತೆ ಮಾರಾಟವಾಗುತ್ತಿವೆ. ಐದು ಬಗೆಯ ತರಕಾರಿ ಖರೀದಿಸಿದೆ’ ಎಂದು ಗ್ರಾಹಕಿ ಎಸ್‌.ಅನಸೂಯ ಸಂತಸ ವ್ಯಕ್ತಪಡಿಸಿದರು.

ಹಣ್ಣಿನ ದರ ಸ್ಥಿರ: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಹಣ್ಣುಗಳು ರಾಶಿ ಹಾಕಲಾಗಿದೆ. ಹಬ್ಬದ ವೇಳೆ ಇದ್ದ ದರವೇ ಈಗಲೂ ಇದ್ದು, ಸದ್ಯ ದರಗಳು ಸ್ಥಿರತೆ ಕಾಯ್ದುಕೊಂಡಿವೆ. ಬೇಸಿಗೆ ಮುಗಿಯುವಷ್ಟರಲ್ಲಿ ದರ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

**

ತರಕಾರಿ ದರ ಕುಸಿತದಿಂದಾಗಿ ಲಾಭ ಕೈಸೇರುತ್ತಿಲ್ಲ. ಇದೇ ತಿಂಗಳಿನಲ್ಲಿ ಯುಗಾದಿ ಹಬ್ಬ ಇರುವುದರಿಂದ ತರಕಾರಿ ದರ ಏರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಅಲ್ಲಿವರೆಗೆ ತರಕಾರಿ ಅಗ್ಗವಾಗಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚು.
-ಶಾಂತರಾಜು, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.