ADVERTISEMENT

ಯುಗಾದಿ: ತರಕಾರಿ ದರ ದಿಢೀರ್ ಏರಿಕೆ

ಕೊರೊನಾ ಭೀತಿ ಲೆಕ್ಕಿಸದೆ ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 20:42 IST
Last Updated 23 ಮಾರ್ಚ್ 2020, 20:42 IST
ಕೆ.ಆರ್.ಮಾರುಕಟ್ಟೆಯಲ್ಲಿ ಸೋಮವಾರ ಖರೀದಿ ಭರಾಟೆ –ಪ್ರಜಾವಾಣಿ ಚಿತ್ರ
ಕೆ.ಆರ್.ಮಾರುಕಟ್ಟೆಯಲ್ಲಿ ಸೋಮವಾರ ಖರೀದಿ ಭರಾಟೆ –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ನಗರದೆಲ್ಲೆಡೆ ಕೊರೊನಾ ಹಬ್ಬುವ ಭೀತಿ ಆವರಿಸಿದ ನಡುವೆಯೂ ಯುಗಾದಿ ಹಬ್ಬದ ಖರೀದಿ ಭಾರಾಟೆ ಜೋರಾಗಿತ್ತು. ಜನತಾ ಕರ್ಫ್ಯೂವಿನಿಂದಾಗಿ ಭಾನುವಾರ ಮನೆಯಲ್ಲೇ ಉಳಿದಿದ್ದ ಜನ ಸೋಮವಾರ ಹೂವು, ಹಣ್ಣು ಖರೀದಿಗೆ ಮುಗಿಬಿದ್ದರು. ಕೆಲವು ದಿನಗಳಿಂದ ನೀರಸ ವ್ಯಾಪಾರದಿಂದ ಭಣಗುಡುತ್ತಿದ್ದ ಮಾರುಕಟ್ಟೆಗಳು ಸೋಮವಾರ ಗ್ರಾಹಕರಿಂದ ತುಂಬಿದ್ದವು. ಗ್ರಾಹಕರು ಬೆಲೆ ಏರಿಕೆಯ ಬಿಸಿಯನ್ನೂ ಅನುಭವಿಸಬೇಕಾಯಿತು.

ಕೊರೊನಾ ಸೋಂಕಿನ ಹೊಡೆತಕ್ಕೆ 15 ದಿನಗಳಿಂದ ಕೆ.ಆರ್‌.ಮಾರುಕಟ್ಟೆಗೆ ಹೂವು ಆವಕವಾಗದೆ, ಇತ್ತ ಗ್ರಾಹಕರೂ ಇಲ್ಲದೆ ಖಾಲಿ ಹೊಡೆಯುತ್ತಿತ್ತು. ಗ್ರಾಹಕರು ಬಾರದ ಕಾರಣ ತರಕಾರಿ ಕೊಳ್ಳುವವರೇ ಇರಲಿಲ್ಲ. ಇದರಿಂದ ತರಕಾರಿ ದರಗಳೂ ನೆಲಕಚ್ಚಿದ್ದವು. ಆದರೆ ಯುಗಾದಿಯ ದೆಸೆಯಿಂದಾಗಿ ಮಾರುಕಟ್ಟೆಗಳು ಮತ್ತೆ ಕಳೆಗಟ್ಟಿದವು. ಮಾರ್ಚ್‌ 31ರವರೆಗೆ ಬೆಂಗಳೂರು ಸೇರಿ ಒಂಬತ್ತು ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿದ್ದರಿಂದ ಹಬ್ಬಕ್ಕೂ ಎರಡು ದಿನ ಮುನ್ನವೇ ಅಗತ್ಯ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ಜನ ಮುಂದಾದರು. ಮಾರು
ಕಟ್ಟೆಗಳನ್ನು ಮುಚ್ಚಬಹುದು ಎಂಬ ಆತಂಕದಿಂದ ಜನ ಮನೆಗೆ ಬೇಕಾಗುವಷ್ಟು ತರಕಾರಿ, ಹೂವು ಮತ್ತು ಹಣ್ಣು ಖರೀದಿಸಿದರು.

ಬೆಲೆ ಏರಿಕೆ: ‘ಹಬ್ಬಕ್ಕೆ ತರಕಾರಿ, ಹೂವಿನ ಬೆಲೆ ಕಡಿಮೆ ಇರಲಿದೆ. ರಜೆ ಇರುವುದರಿಂದ ಹಬ್ಬವನ್ನು ಕಡಿಮೆ ಖರ್ಚಿನಲ್ಲಿ ಆಚರಿಸ
ಬಹುದು’ ಎಂದು ಭಾವಿಸಿದ್ದ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ಹಣ್ಣು ತರಕಾರಿ ಬೆಲೆಗಳು ಭಾರಿ ಏರಿಕೆ ಕಂಡವು. ಬೀನ್ಸ್‌, ಕ್ಯಾರೆಟ್‌, ಬೆಂಡೆಕಾಯಿ, ಬದನೆ, ಟೊಮೆಟೊಕಳೆದ ವಾರ ₹10ರಿಂದ ₹20ರಂತೆ ಮಾರಾಟವಾಗುತ್ತಿತ್ತು. ಅವುಗಳ ದರ ದುಪ್ಪಟ್ಟಾಗಿದೆ.

ADVERTISEMENT

‘ಹಾಪ್‌ಕಾಮ್ಸ್‌ ಸೇವೆ ಲಭ್ಯ’: ‘ಹಾಪ್‌ಕಾಮ್ಸ್‌ ಮುಚ್ಚುವಂತೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಹಬ್ಬಕ್ಕೆ ಇದರಿಂದ ಯಾವುದೇ ತೊಂದರೆಯಿಲ್ಲ. ಸರ್ಕಾರದಿಂದ ಆದೇಶ ಬಂದರೆ ಮಳಿಗೆಗಳನ್ನು ಮುಚ್ಚಲಾಗುವುದು’ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.