ಬೆಂಗಳೂರು: ಫೆಂಜಲ್ ಚಂಡಮಾರುತದ ಪ್ರಭಾವದಿಂದ ಇತ್ತೀಚೆಗೆ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ತರಕಾರಿ ದರಗಳು ಹೆಚ್ಚಾಗಿವೆ. ಒಂದು ಕೆ.ಜಿ ನುಗ್ಗೆಕಾಯಿ ಹಾಗೂ ಬೆಳ್ಳುಳ್ಳಿ ₹400ರಂತೆ ಮಾರಾಟವಾಗುತ್ತಿವೆ.
ಬೆಂಗಳೂರು ನಗರಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ತರಕಾರಿ ಪೂರೈಕೆ ಆಗುತ್ತದೆ. ಆದರೆ ಈ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ತರಕಾರಿ ಬೆಳೆಗಳು ನೆಲಕಚ್ಚಿವೆ. ಇದರಿಂದ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದ ಕಾರಣ ತರಕಾರಿ ದರಗಳು ಏರಿಕೆಯಾಗಿವೆ.
‘ಮಾರುಕಟ್ಟೆಗೆ ಸ್ಥಳೀಯ ನುಗ್ಗೆಕಾಯಿ ಪೂರೈಕೆ ಆಗುತ್ತಿಲ್ಲ. ಮಹಾರಾಷ್ಟ್ರದಿಂದ ಪೂರೈಕೆ ಆಗುತ್ತಿದ್ದು, ಇದರ ಬೆಲೆ ದುಪ್ಪಟ್ಟಾಗಿದೆ. ವಾರದ ಹಿಂದೆ ಒಂದು ಕೆ.ಜಿಗೆ ₹600ರಂತೆ ಮಾರಾಟವಾಗುತ್ತಿತ್ತು. ಈಗ ₹400ರಂತೆ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಅಕ್ರಂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ನಗರದ ಮಾರುಕಟ್ಟೆಗೆ ತಮಿಳುನಾಡಿನಿಂದ ಹೆಚ್ಚು ತರಕಾರಿ ಪೂರೈಕೆ ಆಗುತ್ತದೆ. ಆದರೆ ಅಲ್ಲಿ ಚಂಡಮಾರುತದ ಪರಿಣಾಮ ಮಳೆ ಸುರಿದು ತರಕಾರಿ ಬೆಳೆಗಳು ಹಾಳಾಗಿವೆ. ಆದ ಕಾರಣ ಮಾರುಕಟ್ಟೆಗೆ ಮಹಾರಾಷ್ಟ್ರದಿಂದ ತರಕಾರಿ ಪೂರೈಕೆ ಆಗುತ್ತಿದೆ’ ಎಂದು ವಿವರಿಸಿದರು.
‘ಬೆಳ್ಳುಳ್ಳಿ ದರವೂ ಏರಿಕೆಯಾಗುತ್ತಲೇ ಇದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 400 ರಿಂದ 420ರವರೆಗೂ ಮುಟ್ಟಿದೆ. ಕಳೆದವಾರ ಕೆ.ಜಿಗೆ 320 ರಿಂದ 350ರವರೆಗೆ ದರ ಇತ್ತು. ಚಂಡಮಾರುತದ ಪ್ರಭಾವ ಹಾಗೂ ಹೊರ ರಾಜ್ಯಗಳಿಂದ ಪೂರೈಕೆ ಕುಸಿದಿರುವುದು ಬೆಳ್ಳುಳ್ಳಿ ಬೆಲೆ ಹೆಚ್ಚಾಗಲು ಪ್ರಮುಖ ಕಾರಣ. ಹೋಟೆಲ್, ರೆಸ್ಟೊರೆಂಟ್ ಸಹಿತ ಗೃಹ ಬಳಕೆಗೆ, ಮಸಾಲೆ ಪದಾರ್ಥಗಳ ತಯಾರಿಗೆ ಬೆಳ್ಳುಳ್ಳಿ ಪ್ರಧಾನವಾಗಿ ಬಳಸುವುದರಿಂದ ಬೇಡಿಕೆ ಹೆಚ್ಚಿದ್ದು ದರವೂ ಏರುಗತಿಯಲ್ಲಿ ಸಾಗಿದೆ’ ಎಂದು ವ್ಯಾಪಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.