ADVERTISEMENT

ತಂತ್ರಾಂಶದಲ್ಲಿ ಕಾಣದ ಹೊಗೆ ತಪಾಸಣೆ: ಸಂಕಷ್ಟಕ್ಕೆ ಸಿಲುಕುತ್ತಿರುವ ವಾಹನ ಮಾಲೀಕರು

ಬಾಲಕೃಷ್ಣ ಪಿ.ಎಚ್‌
Published 15 ಜನವರಿ 2026, 0:37 IST
Last Updated 15 ಜನವರಿ 2026, 0:37 IST
<div class="paragraphs"><p>ಹೊಗೆ ತಪಾಸಣೆ  </p></div>

ಹೊಗೆ ತಪಾಸಣೆ

   

ಪ್ರಜಾವಾಣಿ ಚಿತ್ರ

ಬೆಂಗಳೂರು: ವಾಹನಗಳ ಹೊಗೆ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆದಿದ್ದರೂ ‘ವಾಹನ್‌–4’ ತಂತ್ರಾಂಶದಲ್ಲಿ ಕಾಣಿಸುತ್ತಿಲ್ಲ. ಹಾಗಾಗಿ ಹೊರ ರಾಜ್ಯಗಳಿಗೆ ತೆರಳುವ ವಾಹನಗಳ ಮಾಲೀಕರು ದಂಡ ಕಟ್ಟಬೇಕಾದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹೊಸ ತಂತ್ರಾಂಶ ಸಿದ್ಧವಾಗಿದ್ದರೂ ಅದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. 

ADVERTISEMENT

ಹಳೇ ತಂತ್ರಾಂಶ ಬದಲಾಯಿಸಲು ಸಾರಿಗೆ ಇಲಾಖೆ ವರ್ಷಗಳ ಹಿಂದೆಯೇ ನಿರ್ಧರಿಸಿತ್ತು. ‘ಹೊಗೆ ಪರೀಕ್ಷೆ’ ಪ್ರಮಾಣಪತ್ರದೊಂದಿಗೆ ಕ್ಯೂಆರ್‌ ಕೋಡ್‌ ಕೂಡ ಇರಲಿದ್ದು, ದೇಶದ ಯಾವುದೇ ಮೂಲೆಯಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಮಾಡಿದರೂ ‘ಮಾಲಿನ್ಯ’ ಪರೀಕ್ಷೆ ಸಹಿತ ಎಲ್ಲ ವಿವರಗಳು ಸಿಗುವ ತಂತ್ರಾಂಶ ಅಭಿವೃದ್ಧಿಪಡಿಸಲು ವರ್ಷದ ಹಿಂದೆ ಟೆಂಡರ್‌ ಕರೆಯಲಾಗಿತ್ತು. ‘ಟೆಕ್‌ ವಾಣಿಜ್ಯ ಟೆಂಡರ್‌’ ಪಡೆದಿರುವ ‘ಮೇರು ಇನ್ಫೊ ಸೊಲ್ಯುಷನ್‌’ ಹೊಸ ತಂತ್ರಜ್ಞಾನ ಒಳಗೊಂಡಿರುವ ತಂತ್ರಾಂಶ ತಯಾರಿಸಿತ್ತು. ಆದರೆ, ಜಾರಿ ಮಾಡಲು ಸರ್ಕಾರದಿಂದ ಇನ್ನೂ ಒಪ್ಪಿಗೆ ಸಿಗದೆ ಇರುವುದರಿಂದ ಅಲ್ಲಿಗೇ ಪ್ರಕ್ರಿಯೆ ನಿಂತುಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬೇರೆ ರಾಜ್ಯಗಳಲ್ಲಿ ಸಂಚಾರ ಪೊಲೀಸರು ಇಲ್ಲವೇ ಸಾರಿಗೆ ಅಧಿಕಾರಿಗಳು ಹೊಗೆ ತಪಾಸಣೆ ಬಗ್ಗೆ ಪರಿಶೀಲಿಸುತ್ತಾರೆ. ಹೊಗೆ ತಪಾಸಣೆ ಮಾಡಿಸದೇ ಇದ್ದರೆ ₹1 ಸಾವಿರ ದಂಡ ವಿಧಿಸುತ್ತಾರೆ. ತಪಾಸಣೆ ಮಾಡಿರುವ ಬಗ್ಗೆ ಪ್ರಮಾಣಪತ್ರ ನೀಡಿದ ನಂತರ, ಅದರ ವಿವರವು ತಂತ್ರಾಂಶದಲ್ಲಿ ಇಲ್ಲದೇಹೋದರೆ ನಕಲಿ ಪ್ರಮಾಣಪತ್ರ ಸೃಷ್ಟಿಸಿದ್ದೀರಿ ಎಂದು ₹10 ಸಾವಿರ ದಂಡ ವಿಧಿಸುತ್ತಾರೆ’ ಎಂದು ವಾಹನ ಚಾಲಕರು ಅಲವತ್ತುಕೊಂಡಿದ್ದಾರೆ.

‘ವಾಹನ್‌– 4ರ ಜೊತೆಗೆ ವಾಯುಮಾಲಿನ್ಯ ತಪಾಸಣೆಯ ವಿವರವನ್ನು ಸಂಯೋಜನೆ ಮಾಡಲು ಹಿಂದಿನ ತಂತ್ರಾಂಶದಲ್ಲಿ ಸಾಧ್ಯವಿಲ್ಲ. 2010ರಲ್ಲಿ ಅಭಿವೃದ್ಧಿಪಡಿಸಿದ್ದ ಆ ತಂತ್ರಾಂಶದ ಅವಧಿ 2016ಕ್ಕೆ ಮುಗಿದು ಹೋಗಿದ್ದರೂ ಈಗಲೂ ಅದನ್ನೇ ಬಳಸಲಾಗುತ್ತಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಾಯುಮಾಲಿನ್ಯ ತಪಾಸಣೆ ಕೇಂದ್ರಗಳನ್ನು ಪೊಲ್ಯೂಶನ್‌ ಅಂಡರ್ ಕಂಟ್ರೋಲ್‌ ಸೆಂಟರ್‌ (ಪಿಯುಸಿಸಿ) ಎಂದು ಕರೆಯಲಾಗುತ್ತದೆ. ವಾಹನಗಳು ಉಗುಳುವ ಹೊಗೆಯ ಪ್ರಮಾಣ ಆಧರಿಸಿ ಅವುಗಳ ಎಂಜಿನ್‌ ಸ್ಥಿತಿ ತಿಳಿಯಲಾಗುತ್ತದೆ. ಸದೃಢತಾ ಅವಧಿ ಮುಗಿದಿರುವ ವಾಹನಗಳನ್ನು ಮುಂದೆ ಎಷ್ಟು ಸಮಯ ಓಡಿಸಬಹುದು ಎಂಬುದು ಕೂಡ ಹೊಗೆ ತಪಾಸಣೆ ನಂತರ ನಮೂದಾಗುತ್ತದೆ. ಬಿ1, ಬಿ2, ಬಿ3 ಹಂತದ ವಾಹನಗಳಿಗೆ ಆರು ತಿಂಗಳು ಅವಕಾಶ, ಬಿ4, ಬಿ5 ಹಂತದಲ್ಲಿರುವ ವಾಹನಗಳಿಗೆ ಒಂದು ವರ್ಷ ಅವಕಾಶ ಸಿಗಲಿದೆ. ಬೇರೆ ರಾಜ್ಯಗಳಲ್ಲಿ ನಮ್ಮ ರಾಜ್ಯದ ವಾಹನಗಳಿಗೆ ದಂಡ ಬೀಳುವುದೂ ತಪ್ಪಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದ್ದೇ ಸಮಸ್ಯೆ: ಆರೋಪ

‘ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಿ ಉಂಟಾಗಿದೆ. ಹೊಗೆ ತಪಾಸಣೆ ಮಾಡಿಸಿ ಪಡೆಯುವ ಪ್ರಮಾಣಪತ್ರಗಳು ವಾಹನ್‌–4ರಲ್ಲಿ ತೋರಿಸದೇ ಇದ್ದರೂ ರಾಜ್ಯದ ಒಳಗೆ ಸಾಕಾಗುತ್ತದೆ. ಹೊರ ರಾಜ್ಯಗಳಿಗೆ ಹೋದಾಗ ಸಮಸ್ಯೆಯಾಗುತ್ತಿದೆ’ ಎಂದು ರಾಜ್ಯ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಎಸ್‌. ನಟರಾಜ ಶರ್ಮ ದೂರಿದ್ದಾರೆ. ‘ಬಸ್‌ ಸೇರಿದಂತೆ ವಾಹನ ಮಾಲೀಕರ ಮೇಲೆ ಹಿಡಿತ ಇಟ್ಟುಕೊಳ್ಳಲು ಇವರು ತಂತ್ರಾಂಶವನ್ನು ಸರಿಪಡಿಸುತ್ತಿಲ್ಲ. ಮಾಲೀಕರು ಇವರ ಕಚೇರಿಗೆ ಹೋಗಿ ಅಗತ್ಯ ‘ಸೇವೆ’ ಸಮರ್ಪಿಸಿದ ಬಳಿಕವೇ ಸರಿಯಾಗಬೇಕು ಎಂದು ಬಯಸುತ್ತಿರುವಂತಿದೆ. ಹೊಸ ತಂತ್ರಾಂಶ ತಯಾರಿಸಿದ್ದರೂ ಅನುಷ್ಠಾನಕ್ಕೆ ಒಪ್ಪಿಗೆ ಸಿಗುತ್ತಿಲ್ಲ ಎಂದರೆ ಇದು ಸಾರಿಗೆ ಇಲಾಖೆ ಮತ್ತು ಸಾರಿಗೆ– ರಸ್ತೆ ಸುರಕ್ಷತೆ ವಿಭಾಗದ ಆಂತರಿಕ ಸಮಸ್ಯೆ. ಅದಕ್ಕೆ ನಾವು ಯಾಕೆ ದಂಡ ಕಟ್ಟಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ಪತ್ರ ಬರೆದಿದ್ದೇವೆ: ಸಾರಿಗೆ ಇಲಾಖೆ

‘ಹೊಸ ತಂತ್ರಾಂಶ ಅಳವಡಿಕೆಗೆ ರಾಜ್ಯ ಸರ್ಕಾರಕ್ಕೆ ‍ಪತ್ರ ಬರೆದಿದ್ದೇವೆ. ಒಪ್ಪಿಗೆ ಸಿಕ್ಕಿದ ಕೂಡಲೇ ಜಾರಿ ಮಾಡಲಾಗುವುದು’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌ ತಿಳಿಸಿದ್ದಾರೆ. ‘ಸರ್ವರ್‌ ಅಳವಡಿಸಲಾಗಿದೆ. ಇಂಟರ್‌ನೆಟ್‌ ಇದೆ. ತಂತ್ರಾಂಶವು ಪರೀಕ್ಷಾ ಹಂತದಲ್ಲಿದೆ. ಅನುಮತಿ ಸಿಕ್ಕಿದರೆ ಒಂದು ತಿಂಗಳ ಒಳಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ತಪಾಸಣೆ ಆರಂಭಗೊಳ್ಳಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.