ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಸತಿ ಮತ್ತು ವಸತಿಯೇತರ ಕಟ್ಟಡಗಳಲ್ಲಿರುವ ವಾಹನ ನಿಲ್ದಾಣ (ಪಾರ್ಕಿಂಗ್) ಪ್ರದೇಶಕ್ಕೆ ಶುಲ್ಕವನ್ನು ಮರುನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಯುನಿಟ್ ಏರಿಯಾ ವ್ಯಾಲ್ಯೂ (ಯುಎವಿ)ಯಂತೆ ಯೂನಿಟ್ ಶುಲ್ಕ ನಿಗದಿಪಡಿಸಿ, ಬಿಬಿಎಂಪಿ ಮುಖ್ಯ ಆಯುಕ್ತರು ಕರಡು ಅಧಿಸೂಚನೆಯನ್ನು ಮಾರ್ಚ್ 29ರಂದು ಹೊರಡಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಏಳು ದಿನ ಅವಕಾಶ ನೀಡಲಾಗಿದೆ.
2016ರ ಮಾರ್ಚ್ 28ರ ಅಧಿಸೂಚನೆಯಂತೆ ವಲಯ ವರ್ಗೀಕರಣದಲ್ಲಿ ಯುಎವಿ ನಿರ್ಧರಿಸಲಾಗಿತ್ತು. ತೆರಿಗೆ ಸೂತ್ರದಂತೆ, ವಲಯ ವರ್ಗೀಕರಣ (ಎ,ಬಿ,ಸಿ,ಡಿ,ಇ ಎಫ್) ಹಾಗೂ ವರ್ಗದ (ಆರ್‌ಸಿಸಿ, ರೆಡ್ ಆಕ್ಸೈಡ್, ಶೀಟ್/ ಟೈಲ್) ಯೂನಿಟ್ ದರದ ಶೇ 50ರಷ್ಟನ್ನು ವಾಹನ ನಿಲುಗಡೆ ಶುಲ್ಕವಾಗಿ ಸಂಗ್ರಹಿಸಲಾಗುತ್ತಿತ್ತು. ಅದನ್ನು ಪರಿಷ್ಕರಿಸಿ ಎಲ್ಲ ವಲಯ ವರ್ಗೀಕರಣ ಹಾಗೂ ವರ್ಗದ ಸ್ವತ್ತುಗಳಿಗೂ ಒಂದೇ ರೀತಿಯ ವಾಹನ ನಿಲುಗಡೆ ಪ್ರದೇಶದ ದರಗಳನ್ನು ನಿಗದಿಪಡಿಸಲಾಗಿದೆ.
ವಸತಿ ಕಟ್ಟಡಗಳಲ್ಲಿ ಮುಚ್ಚಿದ ಮತ್ತು ಸ್ಟಿಲ್ಟ್ ವಾಹನ ನಿಲುಗಡೆ ಪ್ರದೇಶವನ್ನು ಸ್ವಂತ ಅಥವಾ ಬಾಡಿಗೆಗೆ ಉಪಯೋಗಿಸುತ್ತಿದ್ದರೆ ಪ್ರತಿ ಚದರಡಿಗೆ ₹2 ಪಾವತಿಸಬೇಕು. ವಸತಿಯೇತರ ಕಟ್ಟಡಗಳು ಪ್ರತಿ ಚದರಡಿಗೆ ₹3 ಪಾವತಿಸಬೇಕು ಎಂದು ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂದು ಕರಡು ಅಧಿಸೂಚನೆ ತಿಳಿಸಲಾಗಿದೆ.
ಹೊಸ ಯುಎವಿ ದರಗಳ ಪ್ರಕಾರ, 150 ಚದರ ಅಡಿಯಷ್ಟು ವಾಹನ ನಿಲ್ದಾಣ ಪ್ರದೇಶವನ್ನು ಹೊಂದಿದ್ದರೆ, ವಸತಿ ಪ್ರದೇಶಕ್ಕೆ ಪ್ರತಿ ಚದರಡಿಗೆ ಪ್ರತಿ ತಿಂಗಳಿಗೆ ₹2ರಂತೆ ₹300 ಆಗುತ್ತದೆ. ತೆರಿಗೆ ಸೂತ್ರದಂತೆ ವರ್ಷಕ್ಕೆ ₹600 ಪಾವತಿಸಬೇಕಾಗುತ್ತದೆ. ವಸತಿಯೇತರ ಕಟ್ಟಡಗಳಿಗೆ ಶುಲ್ಕ ₹1,125ರಷ್ಟಾಗುತ್ತದೆ. ಈ ಶುಲ್ಕ ಈಗ ಪಾವತಿಸುತ್ತಿರುವುದಕ್ಕಿಂತ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಲ್ಕ ಇಳಿಕೆ: ಮುನೀಶ್ ಮೌದ್ಗಿಲ್
‘2016ರ ಮಾರ್ಚ್ 28ರ ಅಧಿಸೂಚನೆಯಂತೆ ಆಸ್ತಿ ತೆರಿಗೆ ನಿರ್ಧರಿಸುವ ಸಮಯದಲ್ಲಿ ವಾಹನ ನಿಲುಗಡೆ ಪ್ರದೇಶವನ್ನು ನಮೂದಿಸಿದವರಿಂದ ಈಗಾಗಲೇ ಆಸ್ತಿ ತೆರಿಗೆಯಲ್ಲೇ ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತಿದೆ. ಹೊಸ ಪರಿಷ್ಕರಣೆಯಂತೆ ಈ ಶುಲ್ಕ ಕಡಿಮೆಯಾಗಲಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು. ‘ವಾಹನ ನಿಲುಗಡೆಗೆ ಹೆಚ್ಚಿನ ಶುಲ್ಕ ವಿಧಿಸದೆ ಎಲ್ಲ ಕಟ್ಟಡಗಳಲ್ಲೂ ವಾಹನ ನಿಲುಗಡೆ ಪ್ರದೇಶವನ್ನು ಹೊಂದಲು ಉತ್ತೇಜಿಸಬೇಕು. ಹೀಗಾಗಿ ಶುಲ್ಕ ಕಡಿಮೆ ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚಿಸಿದ್ದರು. ಅದರಂತೆ ಶುಲ್ಕವನ್ನು ಪರಿಷ್ಕರಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ’ ಎಂದರು.
‘ವಾಹನ ನಿಲುಗಡೆ ಪ್ರದೇಶವನ್ನು ಈಗಾಗಲೇ ಆಸ್ತಿ ತೆರಿಗೆಯಲ್ಲಿ ನಮೂಸಿರುವ ವಸತಿ ಕಟ್ಟಡ ಮಾಲೀಕರಿಗೆ ಶೇ 30ರಷ್ಟು ಶುಲ್ಕ ಕಡಿಮೆಯಾಗಲಿದೆ. ವಸತಿಯೇತರ ಕಟ್ಟಡಗಳ ಮಾಲೀಕರಿಗೆ ಶೇ 25ರಷ್ಟು ಕಡಿತವಾಗಲಿದೆ. ಒಟ್ಟಾರೆ ಬಿಬಿಎಂಪಿಗೆ ₹5 ಸಾವಿರ ಕೋಟಿ ಆಸ್ತಿ ತೆರಿಗೆಯಲ್ಲಿ ಸುಮಾರು ₹50 ಕೋಟಿ ಕಡಿಮೆಯಾಗಲಿದೆ’ ಎಂದು ಮಾಹಿತಿ ನೀಡಿದರು. ‘ವಾಹನಗಳ ನಿಲುಗಡೆ ಪ್ರದೇಶವನ್ನು ಆಸ್ತಿ ತೆರಿಗೆಯಲ್ಲಿ ನಮೂದಿಸದವರು ಈ ವರ್ಷದ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ನಮೂದಿಸಿಕೊಳ್ಳಬಹುದು’ ಎಂದರು.
ಆಸ್ತಿ ತೆರಿಗೆ ಪಾವತಿಗೆ ತಡೆ
ಪ್ರಸಕ್ತ ಆರ್ಥಿಕ ವರ್ಷದಲ್ಲೇ ಆಸ್ತಿ ತೆರಿಗೆಯಲ್ಲಿ ಕಸ ನಿರ್ವಹಣ ಸೇವಾ ಶುಲ್ಕ ಸೇರ್ಪಡೆ ವಾಹನ ನಿಲುಗಡೆ ಶುಲ್ಕದಲ್ಲಿ ಪರಿಷ್ಕರಣೆ ಮಾಡುತ್ತಿರುವುದರಿಂದ ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಸ್ಥಗಿತಗೊಂಡಿದೆ. ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ವೆಬ್‌ಸೈಟ್‌ನಲ್ಲಿ ‘ಆರ್ಥಿಕ ವರ್ಷ 2024–25 ಮುಗಿದಿದೆ ಮತ್ತು ಹೊಸ ಆರ್ಥಿಕ ವರ್ಷ (2025–26) ಆರಂಭವಾಗುತ್ತಿದೆ. ಆನ್‌ನೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ವ್ಯವಸ್ಥೆ ಏಪ್ರಿಲ್ 3ರ ಸಂಜೆ 5ರಿಂದ ಕಾರ್ಯನಿರ್ವಹಿಸುತ್ತದೆ’ ಎಂಬ ಸಂದೇಶವನ್ನು ಪ್ರಕಟಿಸಲಾಗಿದೆ.
‘ಪ್ರಸ್ತಾವಿತ ಶುಲ್ಕಗಳನ್ನೆಲ್ಲ ಆಸ್ತಿ ತೆರಿಗೆ ಮೂಲಕವೇ ಸಂಗ್ರಹಿಸಲು ಆರ್ಥಿಕ ವರ್ಷ ಕೊನೆಗೊಳ್ಳುವ ಅಂತಿಮ ದಿನಗಳಲ್ಲಿ ನಿರ್ಧರಿಸಲಾಯಿತು. ಹೊಸ ಕಾಲಂ ಸೃಷ್ಟಿಸಬೇಕಾದ ಅಗತ್ಯವಿದೆ. ಹೀಗಾಗಿ ಆಸ್ತಿ ತೆರಿಗೆ ವ್ಯವಸ್ಥೆಗೆ ತಡೆಯಾಗಿದೆ. ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ಅವಧಿಯನ್ನು ಮುಂದೆ ತಿಳಿಸಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು.
ಇ–ಖಾತಾ ಹೊಸ ಖಾತಾ ಸ್ಥಗಿತ
ಹೊಸ ಆರ್ಥಿಕ ವರ್ಷದಲ್ಲಿ ಶುಲ್ಕ ತೆರಿಗೆಗಳನ್ನು ಹೆಚ್ಚಾಗಿ ಸಂಗ್ರಹಿಸುವ ಉದ್ದೇಶ ಹೊಂದಿರುವ ಬಿಬಿಎಂಪಿ ಇ–ಖಾತಾ ಮತ್ತು ಹೊಸ ಖಾತಾ ವೆಬ್‌ಸೈಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ‘ಆಸ್ತಿ ತೆರಿಗೆ ಆನ್‌ಲೈನ್ ವ್ಯವಸ್ಥೆಯಲ್ಲಿ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ಹೊಸ ಖಾತಾ ವ್ಯವಸ್ಥೆಯ ಸಾಫ್ಟ್‌ವೇರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಏಪ್ರಿಲ್ 4ರ ನಂತರ ಸೇವೆ ಪುನರಾರಂಭವಾಗಲಿದೆ’ ಎಂದು ತಿಳಿಸಲಾಗಿದೆ.
‘ಇ–ಖಾತಾ ಹೊಸ ಖಾತಾ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಡೇಟಾವನ್ನು ನಮೂದಿಸಿದ ಮೇಲೆ ಸಂದೇಶ ಬರುತ್ತಿದೆ. ಸಾಫ್ಟ್‌ವೇರ್ ಕಾರ್ಯನಿರ್ವಹಿಸದಿದ್ದರೆ ಅಥವಾ ತಾತ್ಕಾಲಿಕವಾಗಿ ತಡೆ ಹಿಡಿದಿದ್ದರೆ ಯಾವ ಡೇಟಾ ನಮೂದಿಸಲು ಬಿಡಬಾರದು. ಈ ಬಗ್ಗೆ ಮೊದಲೇ ತಿಳಿಸಬೇಕಿತ್ತು’ ಎಂದು ವಿಜಯನಗರದ ಚಂದ್ರಪ್ಪ ಹೇಳಿದರು.
ಪರಿಷ್ಕೃತ ವಾಹನ ನಿಲುಗಡೆ ವಾರ್ಷಿಕ ಶುಲ್ಕ (ತೆರಿಗೆ ಸೂತ್ರ)
ವಸತಿ: 150 ಚದರಡಿ (ವಾಹನ ನಿಲುಗಡೆ ಪ್ರದೇಶ) x ₹2 (ಪ್ರತಿ ಚದರಡಿಗೆ) x 10 ತಿಂಗಳು= ₹3,000. ಈ ಮೊತ್ತದಲ್ಲಿ ಶೇ 20ರಷ್ಟು= ₹600
ವಸತಿಯೇತರ: 150 ಚದರಡಿ (ವಾಹನ ನಿಲುಗಡೆ ಪ್ರದೇಶ) x ₹3 (ಪ್ರತಿ ಚದರಡಿಗೆ) x 10 ತಿಂಗಳು= ₹4,500. ಈ ಮೊತ್ತದಲ್ಲಿ ಶೇ 25ರಷ್ಟು= ₹1,125
ಎಷ್ಟು ಉಳಿತಾಯ?
150 ಚದರಡಿ ವಾಹನ ನಿಲುಗಡೆ ಪ್ರದೇಶಕ್ಕೆ ವಾರ್ಷಿಕವಾಗಿ ಸುಮಾರು ₹780 ಪಾವತಿಸುತ್ತಿದ್ದರೆ, ಅಂತಹ ಕಟ್ಟಡ ಮಾಲೀಕರು ₹600 ಪಾವತಿ ಮಾಡಬೇಕಾಗುತ್ತದೆ.
* ಬಿಬಿಎಂಪಿ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.