ADVERTISEMENT

ಬೆಂಗಳೂರು: ಪತ್ನಿಯ ಸಲುಗೆ ಪ್ರಶ್ನಿಸಿದ್ದಕ್ಕೆ ವ್ಯಾಪಾರಿ ಕೊಲೆ

ಚಂದ್ರಾಲೇಔಟ್ ಪೊಲೀಸರಿಂದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮೇ 2022, 16:33 IST
Last Updated 3 ಮೇ 2022, 16:33 IST
ಜೋಯೆಬ್
ಜೋಯೆಬ್   

ಬೆಂಗಳೂರು: ಕಲಾಸಿಪಾಳ್ಯದ ಗುಜರಿ ವ್ಯಾಪಾರಿ ಜೋಯೆಬ್ ಅಬ್ರಾರ್ (33) ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಡಿ 7 ಮಂದಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗಂಗೊಂಡನಹಳ್ಳಿ ನಿವಾಸಿ ಜೋಯೆಬ್, ಪತ್ನಿ ಹಾಗೂ ಪೋಷಕರ ಜೊತೆ ವಾಸವಿದ್ದರು. ಏಪ್ರಿಲ್ 30ರಂದು ಅವರನ್ನು ಅಪಹರಿಸಿ, ಕೊಲೆ ಮಾಡಲಾಗಿತ್ತು. ಈ ಬಗ್ಗೆ ತಾಯಿ ದೂರು ನೀಡಿದ್ದರು. ಪ್ರಮುಖ ಆರೋಪಿ ನದೀಮ್ ಪಾಷಾ (23) ಹಾಗೂ ಆತನ ಸಹಚರರಾದ ಮೊಹಮ್ಮದ್ ಶಫಿ, ಶಬ್ಬೀರ್ ಹುಸೈನ್, ಹನ್ನಾನ್ ಪಾಷಾ, ಮೊಹಮ್ಮದ್ ಮುಬಾರಕ್, ತಬ್ರೇಜ್ ಪಾಷಾ, ತನ್ವೀರ್ ಪಾಷಾನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಟಾಟಾ ಏಸ್‌ ವಾಹನ, ಕಾರು ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.

ADVERTISEMENT

ಪತ್ನಿ ಜೊತೆ ಸಲುಗೆ: ‘ಜೋಯೆಬ್‌ ಪತ್ನಿಯ ಬಾಲ್ಯ ಸ್ನೇಹಿತನಾಗಿದ್ದ ಆರೋಪಿ ನದೀಮ್, ಗಂಗೊಂಡನಹಳ್ಳಿಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಈತನಿಗೂ ಮದುವೆ ಆಗಿತ್ತು. ಅಷ್ಟಾದರೂ ಆರೋಪಿ, ಜೋಯೆಬ್ ಪತ್ನಿ ಜೊತೆ ಸಲುಗೆ ಇಟ್ಟುಕೊಂಡಿದ್ದನೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ಹೇಳಿದರು.

‘ನದೀಮ್ ಹಾಗೂ ಜೋಯೆಬ್ ಪತ್ನಿ ಪರಸ್ಪರ ಮೊಬೈಲ್‌ನಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದರು. ಈ ಸಂಗತಿ ಗೊತ್ತಾಗುತ್ತಿದ್ದಂತೆ ಸಿಟ್ಟಾಗಿದ್ದ ಜೋಯೆಬ್, ನದೀಮ್ ಅಂಗಡಿ ಬಳಿ ಹೋಗಿ ಗಲಾಟೆ ಮಾಡಿದ್ದರು. ಪತ್ನಿ ಜೊತೆಗಿನ ಸಲುಗೆ ಪ್ರಶ್ನಿಸಿದ್ದರು. ಪತ್ನಿಯಿಂದ ದೂರವಿರುವಂತೆ ಎಚ್ಚರಿಕೆ ಸಹ ನೀಡಿದ್ದರು’ ಎಂದೂ ತಿಳಿಸಿದರು.

ಸಹಚರರ ಜೊತೆ ಸೇರಿ ಕೊಲೆ: ‘ಜೋಯೆಬ್‌ ಅವರನ್ನು ಅಪಹರಿಸಿ ಕೊಲೆ ಮಾಡಲು ನದೀಮ್ ಸಂಚು ರೂಪಿಸಿದ್ದ. ಇದಕ್ಕೆ ಸಹಚರರ ಸಹಕಾರ ಪಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ಏಪ್ರಿಲ್ 30ರಂದು ರಾತ್ರಿ 10.45ರ ಸುಮಾರಿಗೆ ಜೋಯೆಬ್ ಹಾಲು ತರಲು ಅಂಗಡಿಗೆ ಹೊರಟಿದ್ದರು. ವಾಹನದಲ್ಲಿ ಬಂದಿದ್ದ ಆರೋಪಿಗಳು, ಜೋಯೆಬ್‌ ಅವರನ್ನು ಅಪಹರಿಸಿದ್ದರು. ಮುಖಕ್ಕೆ ಬಟ್ಟೆ ಕಟ್ಟಿ, ಅದರ ಮೇಲೆ ಪ್ಲಾಸ್ಟರ್‌ ಸುತ್ತಿದ್ದರು. ಉಸಿರಾಡಲು ಸಾಧ್ಯವಾಗದೇ ಜೋಯೆಬ್ ವಾಹನದಲ್ಲೇ ಮೃತಪಟ್ಟಿದ್ದರು. ನಂತರ, ಆರೋಪಿಗಳು ಮೃತದೇಹವನ್ನು ಗಂಗೊಂಡನಹಳ್ಳಿ ಬಳಿ ಪಾದಚಾರಿ ಮಾರ್ಗದಲ್ಲಿ ಎಸೆದು ಹೋಗಿದ್ದರು’ ಎಂದೂ ತಿಳಿಸಿದರು.

‘ಪ್ರಕರಣದಲ್ಲಿ ಪತ್ನಿ ಪಾತ್ರದ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.