ADVERTISEMENT

ವಿಂಟೇಜ್ ಕಾರು-ಬೈಕ್‌ ರ್‍ಯಾಲಿಗೆ ಗೃಹ ಸಚಿವ ಪರಮೇಶ್ವರ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 16:09 IST
Last Updated 7 ಡಿಸೆಂಬರ್ 2025, 16:09 IST
ಡ್ರಗ್ಸ್‌ ಮುಕ್ತ ಕರ್ನಾಟಕ್ಕಾಗಿ ಆಯೋಜಿಸಿದ್ದ ರ್‍ಯಾಲಿಗೆ ಚಾಲನೆ ನೀಡಿದ ಬಳಿಕ ಜಿ. ಪರಮೇಶ್ವರ, ಸೀಮಾಂತ್‌ ಕುಮಾರ್ ಸಿಂಗ್, ಎಂ.ಎ.ಸಲೀಂ ವಿಂಟೇಜ್ ಕಾರಿನಲ್ಲಿ ತೆರಳಿದರು.  ಪ್ರಜಾವಾಣಿ ಚಿತ್ರ ಎಂ.ಎಸ್. ಮಂಜುನಾಥ್
ಡ್ರಗ್ಸ್‌ ಮುಕ್ತ ಕರ್ನಾಟಕ್ಕಾಗಿ ಆಯೋಜಿಸಿದ್ದ ರ್‍ಯಾಲಿಗೆ ಚಾಲನೆ ನೀಡಿದ ಬಳಿಕ ಜಿ. ಪರಮೇಶ್ವರ, ಸೀಮಾಂತ್‌ ಕುಮಾರ್ ಸಿಂಗ್, ಎಂ.ಎ.ಸಲೀಂ ವಿಂಟೇಜ್ ಕಾರಿನಲ್ಲಿ ತೆರಳಿದರು.  ಪ್ರಜಾವಾಣಿ ಚಿತ್ರ ಎಂ.ಎಸ್. ಮಂಜುನಾಥ್    

ಬೆಂಗಳೂರು: ‘ಡ್ರಗ್ಸ್ ಮುಕ್ತ ಕರ್ನಾಟಕ’ ಮಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಹಂತ ಹಂತವಾಗಿ ಡ್ರಗ್ಸ್ ಜಾಲ ನಿರ್ಮೂಲನೆ ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಭಾನುವಾರ ಫೆಡರೇಷನ್‌ ಆಫ್‌ ಹಿಸ್ಟೋರಿಕ್‌ ವೆಹಿಕಲ್ಸ್‌ ಆಫ್‌ ಇಂಡಿಯಾದ ಸಹಯೋಗದಲ್ಲಿ ಪೌಲ್‌ ಜಾನ್‌ ರೆಸಾರ್ಟ್‌ ಮತ್ತು ಹೋಟೆಲ್‌ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಾಣಿಕೆಯ ವಿರೋಧದ ಹೋರಾಟಕ್ಕೆ ಬೆಂಬಲವಾಗಿ ವಿಂಟೇಜ್‌ ಕಾರುಗಳ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

‘ಡ್ರಗ್ಸ್ ಮುಕ್ತ ಕರ್ನಾಟಕ’ ಎಂಬುದು ಸರ್ಕಾರದ ಧ್ಯೇಯ. ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಕಲ ರೀತಿಯಲ್ಲೂ ಪ್ರಯತ್ನ ನಡೆಸಿದ್ದೇವೆ. ಇದಕ್ಕೆ ಸಮಯವೂ ಬೇಕು. ಕರ್ನಾಟಕ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾದಕ ವಸ್ತುಗಳನ್ನು ಯಾರು ಬೆಂಬಲಿಸುತ್ತಾರೋ ಅವರು ಮನಷ್ಯರಲ್ಲ. ಜನರ ಜೀವನದ ಜತೆ ಆಟವಾಡಿ, ಭವಿಷ್ಯ ಮತ್ತು ಆರೋಗ್ಯವನ್ನು ನಾಶ ಮಾಡುತ್ತಾರೆ’ ಎಂದು ಹೇಳಿದರು.

ADVERTISEMENT

‘ಪೆಡ್ಲರ್‌ಗಳು ಶಾಲೆಗೂ ಹೋಗಿ ಚಾಕೋಲೆಟ್ ಮೂಲಕ ಉಚಿತವಾಗಿ ಡ್ರಗ್ಸ್‌ ನೀಡುತ್ತಿದ್ದಾರೆ. ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾಚರಣೆ ಪರಿಣಾಮ ಕಳೆದ ವರ್ಷ ₹300 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಪ್ರಕರಣ ದಾಖಲಿಸಲಾಗಿದ್ದು, ಹಲವರು ಇನ್ನೂ ಜೈಲಿನಲ್ಲಿದ್ದಾರೆ. ವಿದೇಶದಿಂದ ಶಿಕ್ಷಣಕ್ಕಾಗಿ ಬಂದವರೂ ಇಂತಹ ಕೃತ್ಯಗಳಲ್ಲಿ ತೊಡಗಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು, ಐ.ಟಿ ಉದ್ಯೋಗಿಗಳು ಸೇರಿದಂತೆ ಯುವ ಸಮುದಾಯ ದುಶ್ಚಟಗಳಿಂದ ದೂರ ಇದ್ದು, ಉತ್ತಮ ಭವಿಷ್ಯ ಕಂಡುಕೊಳ್ಳಬೇಕು’ ಎಂದು ಕರೆ ನೀಡಿದರು.

ಅರಿವು ಮೂಡಿಸುವ ಪೋಸ್ಟರ್‌ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಫೆಡರೇಷನ್ ಆಫ್ ಹಿಸ್ಟೋರಿಕ್‌ ವೆಹಿಕಲ್ ಇಂಡಿಯಾದ ಡಾ.ರವಿಪ್ರಕಾಶ್, ಪಾಲ್ ಜಾನ್ ರೆಸಾರ್ಟ್‌ನ ಪ್ರಧಾನ ವ್ಯವಸ್ಥಾಪಕ ರಕ್ಷಿತ್ ಶೆಟ್ಟಿ, ಚಿತ್ರನಟ ಮದನ್ ಪಟೇಲ್ ಪಾಲ್ಗೊಂಡಿದ್ದರು.

ಕಾರಿನಲ್ಲಿ ತೆರಳಿದ ಪರಮೇಶ್ವರ

ರ್‍ಯಾಲಿಗೆ ಚಾಲನೆ ನೀಡಿದ ಬಳಿಕ ಪರಮೇಶ್ವರ ನಗರ ಪೊಲೀಸ್‌ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಸ್ವಲ್ಪ ದೂರದವರೆಗೆ ವಿಂಟೇಜ್ ಕಾರಿನಲ್ಲಿ ತೆರಳಿದರು. ಪೊಲೀಸರು ದ್ವಿಚಕ್ರ ವಾಹನಗಳ ಸವಾರರು ಹಾಗೂ ಕಾಲೇಜು ವಿದ್ಯಾರ್ಥಿಗಳು ರ್‍ಯಾಲಿಯಲ್ಲಿ ಸಾಗಿದರು.   ವಿಧಾನಸೌಧದ ಮುಂಭಾಗದಿಂದ ಹೊರಟ ವಿಂಟೇಜ್ ಕಾರು ಮತ್ತು ಬೈಕ್‌ಗಳ ರ್‍ಯಾಲಿ ಬಿಗ್‌ ಬನಿಯಾನ್ ವೈನ್‌ ಯಾರ್ಡ್‌ ಆ್ಯಂಡ್‌ ರೆಸಾರ್ಟ್‌ ತನಕ ಸಾಗಿತು. ಸಾವಿರಾರು ಜನರು ರಸ್ತೆ ಬದಿ ನಿಂತು ಕಾರುಗಳನ್ನು ವೀಕ್ಷಿಸಿದರು. 75ಕ್ಕೂ ಹೆಚ್ಚು ಕಾರುಗಳು ಪಾಲ್ಗೊಂಡಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.