ಪೀಣ್ಯ ದಾಸರಹಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಆರಂಭವಾದ ಮೇಲೆ ಅನುದಾನ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿಲ್ಲ. ಸರ್ಕಾರದ ತಾರತಮ್ಯ ಧೋರಣೆ ಹೀಗೆ ಮುಂದುವರಿದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇನೆ' ಎಂದು ಶಾಸಕ ಎಸ್. ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಾಣಾವರದಲ್ಲಿ ಜಿಲ್ಲಾ ಪಂಚಾಯತಿ ಅನುದಾನದಡಿ ನಿರ್ಮಿಸಿರುವ ₹28 ಲಕ್ಷ ವೆಚ್ಚದ ಪಶು ಚಿಕಿತ್ಸಾಲಯ, ವಿವೇಕ ಯೋಜನೆಯಡಿ ₹13.90ಲಕ್ಷ ವೆಚ್ಚದ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿ, ಸೀಡೇದಹಳ್ಳಿಯಲ್ಲಿ ₹27.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಎರಡು ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
’ಬಡವರ ಪರ ಎಂದು ಹೇಳಿಕೊಳ್ಳುವ ಈ ಸರ್ಕಾರ ಎಲ್ಲಾ ಬೆಲೆಗಳನ್ನು ಜಾಸ್ತಿ ಮಾಡುತ್ತಿದೆ. ಆದರೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀಡುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಾಣಾವರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಈಗಲೂ ತಮ್ಮ ತಮ್ಮ ಮನೆಗಳಲ್ಲಿ ಹಸುಗಳನ್ನು ಸಾಕಿದ್ದಾರೆ. ಅವುಗಳಿಗೆ ಏನಾದರೂ ಕಾಯಿಲೆ ಬಂದರೆ ಹೆಸರಘಟ್ಟಕ್ಕೆ ಹೋಗಬೇಕಾಗಿತ್ತು. ಈಗ ಚಿಕ್ಕಬಾಣಾವರದಲ್ಲೇ ಚಿಕಿತ್ಸೆ ಕೊಡಿಸಲು ಪಶು ಚಿಕಿತ್ಸಾಲಯ ಪ್ರಾರಂಭಿಸಲಾಗಿದೆ' ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಾಣಾವರ ಪುರಸಭೆಯ ಮುಖ್ಯಾಧಿಕಾರಿ ಹೆಚ್.ಎ. ಕುಮಾರ್, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಹ್ಯೂಮನ್ ರೈಟ್ಸ್ ಪ್ರೋಟೆಕ್ಸನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ, ಲಕ್ಷ್ಮಣ್, ಸ್ಥಳೀಯ ಮುಖಂಡರಾದ ಪಿ.ಹೆಚ್. ರಾಜು,ಭಾಗ್ಯಮ್ಮ, ಕಬೀರ್, ಮಹಮದ್ ಸಲೀಂ ಅಹಮದ್, ಸ್ವಾಮಿ, ಪಶು ವೈದ್ಯೆ ಡಾ. ಶ್ರುತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.