ADVERTISEMENT

ರೋಗಿಗಳ ಆರೈಕೆಯಲ್ಲಿ ತೊಡಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ನರ್ಸ್‌ಗೂ ಸೋಂಕು

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 189ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 21:27 IST
Last Updated 13 ಮೇ 2020, 21:27 IST
   

ಬೆಂಗಳೂರು: ಕೋವಿಡ್–19 ರೋಗಿಗಳನ್ನು ಆರೈಕೆ ಮಾಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ಶುಶ್ರೂಷಕಿಗೆ ಸೋಂಕು ತಗುಲಿದ್ದು, ಈಗ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ನಗರದಲ್ಲಿ ಬುಧವಾರ7 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 189ಕ್ಕೆ ಏರಿಕೆಯಾಗಿದೆ. 37 ವರ್ಷದ ಶುಶ್ರೂಷಕಿ ರೋಗಿಗಳ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ನಿರಂತರ ಒಂದು ವಾರ ಕಾರ್ಯನಿರ್ವಹಿಸಿದ್ದ ನರ್ಸ್‌, ನಿಯಮದಂತೆ 14 ದಿನಗಳು ಕ್ವಾರಂಟೈನ್‌ಗೆ ಒಳಗಾಗಿದ್ದರು. ಅವರನ್ನು ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆ ಮಾಡುವ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಶುಶ್ರೂಷಕಿ ಏ.23 ರಿಂದಲೂ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಅವರು ಮನೆಗೆ ಹೋಗಿರಲಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್‌ಗೆ ಹೋಗುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷಾ ಸಾಧನವನ್ನು (ಪಿಪಿಇ ಕಿಟ್‌) ನೀಡಲಾಗುತ್ತಿದೆ. ಇವರು ಕೂಡ ಪಿಪಿಇ ಕಿಟ್ ಧರಿಸಿಯೇ ಕಾರ್ಯನಿರ್ವಹಿಸುತ್ತಿದ್ದರು. ಆದರೂ ಸೋಂಕು ತಗುಲಿರುವುದು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.

ADVERTISEMENT

ಯುವಕನಿಗೆ ಸೋಂಕು: ವಿಶೇಷ ವಿಮಾನ ದಲ್ಲಿ ಲಂಡನ್‌ನಿಂದ ನಗರಕ್ಕೆ ಸೋಮವಾರ ವಾಪಸಾಗಿದ್ದ 24 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ‌ಇಲ್ಲಿಗೆ ಬಂದ ಬಳಿಕ ಕೋವಿಡ್ ಪರೀಕ್ಷೆ ನಡೆಸಿ, ಎಲ್ಲ ಪ್ರಯಾಣಿಕರನ್ನು ಯಶವಂತಪುರದಲ್ಲಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಬುಧವಾರ ಬಂದ ವರದಿಯಲ್ಲಿ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಯುವಕನ ಸಂಪರ್ಕದಲ್ಲಿದ್ದವರು ಹೋಟೆಲ್‌ನಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ನಗರದಲ್ಲಿ ಸದ್ಯ 86 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 95 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ದೊಡ್ಡ ಬಸ್ತಿ: ಕಂಟೈನ್‌ಮೆಂಟ್ ತೆರವು

ಕಳೆದ 28 ದಿನಗಳಿಂದ ಯಾವುದೇ ಕೋವಿಡ್ ಪ್ರಕರಣ ವರದಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡ ಬಸ್ತಿ ಗ್ರಾಮದ ಕಂಟೈನ್‌ಮೆಂಟ್ ತೆರವುಗೊಳಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಏ.14ರಂದು ದೊಡ್ಡ ಬಸ್ತಿಯಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿತ್ತು. ಹಾಗಾಗಿ ಏ.17ರಂದು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿತ್ತು. ಅಲ್ಲಿ 2,400 ಮಂದಿ ವಾಸವಿದ್ದಾರೆ.

ಪಾದರಾಯನಪುರ: ಐವರಿಗೆ ಸೋಂಕು

ನಗರದ ಹಾಟ್‌ಸ್ಪಾಟ್ ವಲಯವಾದ ಪಾದರಾಯನಪುರದಲ್ಲಿ ಹೊಸದಾಗಿ ಐವರಿಗೆ ಸೋಂಕು ತಗುಲಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ಬುಧವಾರ ರಾತ್ರಿ ದೃಢಪಟ್ಟಿದೆ. 554ನೇ ರೋಗಿಯ ಸಂಪರ್ಕದಿಂದ 10 ವರ್ಷದ ಇಬ್ಬರು ಮಕ್ಕಳು ಹಾಗೂ ದಂಪತಿ ಸೋಂಕಿತರಾಗಿದ್ದಾರೆ. 555ನೇ ರೋಗಿಯ ಸಂಪರ್ಕದಿಂದ 8 ವರ್ಷದ ಮಗುವಿಗೆ ಸೋಂಕು ತಗುಲಿದೆ. ಇದರಿಂದಾಗಿ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.