ADVERTISEMENT

ವಿದ್ಯಾಭೂಷಣರಿಗೆ ಸಂಗೀತ ಸಾಧನಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 22:53 IST
Last Updated 19 ಫೆಬ್ರುವರಿ 2026, 22:53 IST
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗಾಯಕ ವಿದ್ಯಾಭೂಷಣ ಅವರಿಗೆ ಜೀವಮಾನ ಸಂಗೀತ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರಿ ನಾಗರಾಜ್, ಎನ್.ಸಂತೋಷ್ ಹೆಗ್ಡೆ, ನಾಗರಾಜ್, ಆರ್‌.ಕೆ.ಪದ್ಮಾನಾಭ ಇದ್ದರು. 
ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಗಾಯಕ ವಿದ್ಯಾಭೂಷಣ ಅವರಿಗೆ ಜೀವಮಾನ ಸಂಗೀತ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌರಿ ನಾಗರಾಜ್, ಎನ್.ಸಂತೋಷ್ ಹೆಗ್ಡೆ, ನಾಗರಾಜ್, ಆರ್‌.ಕೆ.ಪದ್ಮಾನಾಭ ಇದ್ದರು.    

ಬೆಂಗಳೂರು: ‘ಪ್ರಶಸ್ತಿ ಸ್ವೀಕರಿಸುವವರು ಶುದ್ಧವಾಗಿರಬೇಕು ಹಾಗೂ ಪ್ರಶಸ್ತಿ ನೀಡುವವರು ಸಹ ಅಷ್ಟೇ ಪರಿಶುದ್ಧರಾಗಿರಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ 26ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹಣ ಕೊಟ್ಟು ಪ್ರಶಸ್ತಿಗಳನ್ನು ತೆಗೆದುಕೊಳ್ಳುವ  ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲವೂ ವ್ಯಾಪಾರವಾಗಿದೆ. ನಿತ್ಯ ಪತ್ರಿಕೆಗಳಲ್ಲಿ ಈ ರೀತಿಯ ಸುದ್ದಿಗಳನ್ನು ನೋಡುತ್ತಿದ್ಧೇವೆ. ಆದರೆ, ರಾಘವೇಂದ್ರ ಸೇವಾ ಪ್ರತಿಷ್ಠಾನ ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿ, ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ADVERTISEMENT

ಇದೇ ವೇಳೆ ‘ಗುರು ರಾಘವೇಂದ್ರ ಸಂಸ್ಮರಣ ಮರಣೋತ್ತರ ಪ್ರಶಸ್ತಿ’ಯನ್ನು ಮಾಧವ ಗುರುರಾಜಾಚಾರ್ ಗುಡಿ ಅವರ ಪರವಾಗಿ ರಮಾ ಮಾಧವ ಗುಡಿ ಪ್ರಶಸ್ತಿ ಸ್ವೀಕರಿಸಿದರು.

‘50ನೇ ವರ್ಷದ ಜೀವಮಾನ ಸಂಗೀತ ಸಾಧನಾ ಪ್ರಶಸ್ತಿ’ ಹಾಗೂ ‘ಶ್ರೀ ರಾಘವೇಂದ್ರ ಹರಿದಾಸ ಸಂಗೀತ ಸೇವಾ ಶಿರೋಮಣಿ’ ಪ್ರಶಸ್ತಿಯನ್ನು ಗಾಯಕ ವಿದ್ಯಾಭೂಷಣ ಅವರಿಗೆ ನೀಡಲಾಯಿತು.

ಇದಕ್ಕೂ ಮುನ್ನ ಸೋಸಲೆ ಸಮೀರಾಚಾರ್, ವಸಂತ್ ಕುಮಾರ್ ಕುಂಬಳೆ, ಕೆ.ಎಸ್.ಸುನಿಲ್, ಎಂ.ಸಿ. ಶ್ರೀನಿವಾಸ್‌ ಅವರು ಪುರಂದರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ವಾಂಸ ಆರ್‌.ಕೆ.ಪದ್ಮಾನಾಭ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ನಿರ್ದೇಶಕ ಪುತ್ತೂರು ನರಸಿಂಹನಾಯಕ್ ಹಾಜರಿದ್ದರು. ಪ್ರತಿಷ್ಠಾನದ ಅಧ್ಯಕ್ಷೆ ಗೌರಿ ನಾಗರಾಜ್, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷೆ ವೀಣಾ ಸುರೇಶ್, ದೇವಸ್ಥಾನದ ಉಪಾಧ್ಯಕ್ಷ ಬಾಲಚಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.