ADVERTISEMENT

ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ಐಎಎಸ್‌ ಅಧಿಕಾರಿ ವಿಜಯ ಶಂಕರ್‌?

ಫೆಬ್ರುವರಿ 10ರಂದು ಕೊನೆಯ ಬಾರಿಗೆ ಪ್ರಶ್ನಿಸಿದ್ದ ಸಿಬಿಐ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 21:51 IST
Last Updated 24 ಜೂನ್ 2020, 21:51 IST
ವಿಜಯ ಶಂಕರ್‌
ವಿಜಯ ಶಂಕರ್‌   

ಬೆಂಗಳೂರು: ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ ಬಿ.ಎಂ. ವಿಜಯ್‌ ಶಂಕರ್‌ ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಪ್ರಕರಣದಲ್ಲಿ ಹತ್ತಿದ ಕಳಂಕದಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

‘ವಿಜಯ್ ಶಂಕರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ಬಂದಿದೆ. ದೂರು ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಆದರೆ, ‘ಅವರಿಗೆ (ಅಧಿಕಾರಿಗೆ) ತೊಂದರೆ ಕೊಟ್ಟರು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದರು’ ಎಂದು ಕುಟುಂಬ ಸದಸ್ಯರು ಮೌಖಿಕವಾಗಿ ತಿಳಿಸಿದ್ದಾರೆ. ನಿರ್ದಿಷ್ಟವಾಗಿ ಯಾರ ಹೆಸರನ್ನೂ ಹೇಳಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೊನೆ ವಿಚಾರಣೆ: ಐಎಂಎ ವಂಚನೆ ಪ್ರಕರಣದಲ್ಲಿ ವಿಜಯ ಶಂಕರ್‌ ಅವರನ್ನು ಫೆಬ್ರುವರಿ 10ರಂದು ಕೊನೆಯ ಬಾರಿಗೆ ಪ್ರಶ್ನಿಸಲಾಗಿತ್ತು. ಆನಂತರ ಅವರ ವಿಚಾರಣೆ ನಡೆದಿಲ್ಲ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡಾ‌ ನೀಡಿರಲಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.

ADVERTISEMENT

ಈ ಪ್ರಕರಣದಲ್ಲಿ ವಿಜಯ ಶಂಕರ್‌, ಬೆಂಗಳೂರು ಉತ್ತರ ವಿಭಾಗ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಮತ್ತು ಗ್ರಾಮ ಲೆಕ್ಕಿಗ ಎನ್‌. ಮಂಜುನಾಥ್‌ ವಿರುದ್ಧ ತನಿಖೆ ಮುಂದುವರಿಸಲು (ಪ್ರಾಸಿಕ್ಯೂಷನ್‌) ಒಪ್ಪಿಗೆ ನೀಡುವಂತೆ ಸಿಬಿಐ ಎರಡು ವಾರದ ಹಿಂದೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದುವರೆಗೆ ಸರ್ಕಾರ ಅನುಮತಿ ನೀಡಿಲ್ಲ ಎಂದೂ ಮೂಲಗಳು ತಿಳಿಸಿವೆ.

ಸಾವಿರಾರು ಠೇವಣಿದಾರರಿಂದ ₹ 4,000 ಕೋಟಿ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಒಳಗಾಗಿರುವ ಐಎಂಎಗೆ ‘ಕ್ಲೀನ್‌ಚಿಟ್’ ಕೊಡಲು ವಿಜಯ್‌ ಶಂಕರ್‌ ಮತ್ತಿತರರು ಲಂಚ ಪಡೆದಿದ್ದರು ಎಂದು ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು.

ಇದೇ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆಯಾಗಿದ್ದ ಅವರನ್ನು ಇತ್ತೀಚೆಗೆ ‘ಸಕಾಲ’ ಮಿಷನ್‌ನ ಹೆಚ್ಚುವರಿ‌ ನಿರ್ದೇಶಕರಾಗಿ ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.