ADVERTISEMENT

ಪಟ್ಟಭದ್ರ ಹಿತಾಸಕ್ತಿಗಳಿಂದ ಸಾವರ್ಕರ್ ವ್ಯಕ್ತಿತ್ವಕ್ಕೆ ಧಕ್ಕೆ: ಸಾತ್ಯಕಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 20:21 IST
Last Updated 11 ಸೆಪ್ಟೆಂಬರ್ 2022, 20:21 IST
ಜಯೋಸ್ತುತಿ ಕಾರ್ಯಕ್ರಮದಲ್ಲಿ ಸಾತ್ಯಕಿ ಸಾವರ್ಕರ್ ಪಾಲ್ಗೊಂಡಿದ್ದರು. ಸಚಿವ ಎಸ್ ಟಿ ಸೋಮಶೇಖರ್, ಸಂಸದ ಡಿ.ವಿ.ಸದಾನಂದಗೌಡ, ಮುಖಂಡರಾದ ಅನಿಲ್ ಚಳಗೇರಿ ರಮೇಶ್, ರ.ಆಂಜನಪ್ಪ, ಎಂ ಜೆ ನಾಗರಾಜ್, ಉಪೇಂದ್ರಕುಮಾರ್‌ ಇದ್ದಾರೆ
ಜಯೋಸ್ತುತಿ ಕಾರ್ಯಕ್ರಮದಲ್ಲಿ ಸಾತ್ಯಕಿ ಸಾವರ್ಕರ್ ಪಾಲ್ಗೊಂಡಿದ್ದರು. ಸಚಿವ ಎಸ್ ಟಿ ಸೋಮಶೇಖರ್, ಸಂಸದ ಡಿ.ವಿ.ಸದಾನಂದಗೌಡ, ಮುಖಂಡರಾದ ಅನಿಲ್ ಚಳಗೇರಿ ರಮೇಶ್, ರ.ಆಂಜನಪ್ಪ, ಎಂ ಜೆ ನಾಗರಾಜ್, ಉಪೇಂದ್ರಕುಮಾರ್‌ ಇದ್ದಾರೆ   

ಕೆಂಗೇರಿ: ಭಾರತವನ್ನು ಛಿದ್ರಗೊಳಿಸುವ ಹುನ್ನಾರ ಮಾಡುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾವರ್ಕರ್ ಅವರನ್ನು ಹೇಡಿ ಹಾಗೂ ದೇಶ ವಿರೋಧಿ ಎಂಬಂತೆ ಬಿಂಬಿಸಲು ವ್ಯವಸ್ಥಿತವಾಗಿ ಸಂಚು ನಡೆಸುತ್ತಿವೆ ಎಂದು ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ದೂರಿದರು.

ವಿವೇಕ ಜಾಗೃತಿ ಸಂಸ್ಥೆ ವತಿಯಿಂದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಯೋಸ್ತುತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯದಿಂದಲೇ ತಮ್ಮದೇ ಆದ ವಿಭಿನ್ನ ಹೋರಾಟ ಹಾಗೂ ಬರಹಗಳಿಂದ ಸ್ವಾತಂತ್ರ್ಯ ಕಿಡಿಯನ್ನು ಹೊತ್ತಿಸಿದ್ದ ಸಾವರ್ಕರ್ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿದ್ದರು. ವಿವಿಧ ಜಾತಿಗಳಿಂದ, ಸಿಖ್ , ಜೈನ್ ,ಬೌದ್ದ ಧರ್ಮಗಳ ಹೆಸರಿನಲ್ಲಿ ಇಬ್ಭಾಗವಾಗಿದ್ದ ಸಮಾಜವನ್ನು ಹಿಂದುತ್ವದ ಕಲ್ಪನೆಯಡಿ ಒಟ್ಟು ಗೂಡಿಸಿ, ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸುವ ಗುರಿ ಹೊಂದಿದ್ದರು. ಭಾರತ ಒಡೆದವರಿಗೆ, ಒಡೆದು ಆಳುವ ಮನಸ್ಥಿತಿ ಇರುವವರಿಗೆ ಈ ವಿಚಾರಧಾರೆ ಸಹ್ಯವಾಗಲಿಲ್ಲ ಎಂದರು.

ADVERTISEMENT

ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಾವರ್ಕರ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅವರ ಕುರಿತ ನಿಜ ಮಾಹಿತಿಯನ್ನು ದೇಶದ ಪ್ರತಿಯೊಬ್ಬರಿಗೂ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಸಾವರ್ಕರ್ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲು ಪಕ್ಷದ ವತಿಯಿಂದ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಗಾಂಧಿ ಹೊರತು ಪಡಿಸಿದಂತೆ ಯಾರೊಬ್ಬರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಒಪ್ಪಿಕೊಳ್ಳಲು ಕಾಂಗ್ರೆಸ್ ಸಿದ್ದವಿಲ್ಲ. ಸಾವರ್ಕರ್ ಅಂತಹ ನೂರಾರು ಹೋರಾಟದಿಂದ ಸ್ವಾತಂತ್ರ್ಯ ದೊರಕಿದೆ ಎಂಬುದನ್ನು ಎಲ್ಲರು ಒಪ್ಪಿಕೊಳ್ಳಲೇಬೇಕು ಎಂದರು.

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷವು ಒಂದು ಕೋಮಿನ ಓಲೈಕೆಗಾಗಿ ಸಾವರ್ಕರ್ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಜನತೆಗೆ ಇದೀಗ ಸತ್ಯದ ಅರಿವು ಆಗುತ್ತಿದೆ ಎಂದು ಹೇಳಿದರು.

ಮುಖಂಡರಾದ ಅನಿಲ್ ಚಳಗೇರಿ ರಮೇಶ್, ರ.ಆಂಜನಪ್ಪ ಎಂ.ಜೆ.ನಾಗರಾಜ್, ಉಪೇಂದ್ರಕುಮಾರ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.