ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸಮಾಧಿ ಪುಣ್ಯಸ್ಥಳವಾಗಿದ್ದು, ಆ ಜಾಗ ಪುಣ್ಯಕ್ಷೇತ್ರದ ರೀತಿಯೇ ಇತ್ತು. ಅದನ್ನು ನೆಲಸಮ ಮಾಡಬಾರದಿತ್ತು ಎಂದು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಮೈಸೂರಿನ ಜತೆಗೆ ಬೆಂಗಳೂರಿನಲ್ಲಿಯೂ ಅಪ್ಪಾಜಿ ಸ್ಮಾರಕವಾದರೆ ಸಂತಸದ ಸಂಗತಿ. ಆದರೆ ಈ ವಿವಾದದಲ್ಲಿ ನಮ್ಮ ಕುಟುಂಬದವರನ್ನು ಖಳನಟರಂತೆ ಬಿಂಬಿಸಲಾಗುತ್ತಿದೆ. ಇದರ ಹಿಂದಿನ ಹೋರಾಟ, ಪರಿಶ್ರಮ ತಿಳಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿ. ಈಗ ಸಮಾಧಿ ಇರುವ ಜಾಗದಲ್ಲಿ ಪೂಜಿಸಬೇಡಿ ಎಂದು ನಾವು ಯಾವತ್ತೂ ಹೇಳಿಲ್ಲ. ಆರೂವರೆ ವರ್ಷಗಳು ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನ ಮಾಡಿದ್ದೇವೆ. ಇಲ್ಲಿ ಸ್ಮಾರಕ ಆಗುವುದೇ ಇಲ್ಲ ಎಂಬುದು ಖಚಿತವಾದಾಗ ಮೈಸೂರಿಗೆ ಹೋಗಿದ್ದೇವೆ’ ಎಂದರು.
‘ಇವತ್ತು ಮೈಸೂರಲ್ಲಿ ಐದು ಎಕರೆ ಜಾಗದಲ್ಲಿ ಸ್ಮಾರಕವಾಗಿದೆ. ಅದು ಹೇಗೆ ಆಗಿದ್ದು? ಅದಕ್ಕಾಗಿ ಎಷ್ಟು ಕಚೇರಿಗಳನ್ನು ಅಲೆದಿದ್ದೇವೆ ಎಂಬುದು ಗೊತ್ತಿದೆಯಾ? ಪ್ರಯತ್ನಗಳ ಬಗ್ಗೆ ಗೊತ್ತಿಲ್ಲದೇ ಆರೋಪ ಹೊರಿಸಲಾಗುತ್ತಿದೆ. ಕುಟುಂಬ ಮತ್ತು ಅಭಿಮಾನಿಗಳ ನಡುವೆ ಬಿರುಕು ಮೂಡಿಸುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಂಗಳೂರು, ಮೈಸೂರಿನಲ್ಲಿ ಸ್ಮಾರಕಕ್ಕಾಗಿ ಸಾಕಷ್ಟು ಜಾಗಗಳನ್ನು ನೋಡಿದ್ದೆವು. ಎಲ್ಲ ಕಡೆ ಒಂದಲ್ಲ ಒಂದು ರೀತಿ ಸಮಸ್ಯೆಯಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ಮಾಡಲು 2018ರಲ್ಲಿ ಸರ್ಕಾರ ಕೇಳಿತು. ಆಗ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಹತ್ತಿರದಲ್ಲಿತ್ತು. ಹೀಗಾಗಿ ಮತ್ತೆ ಜಾಗ ಬದಲಿಸಲು ಸಾಧ್ಯವಿಲ್ಲ ಎಂದೆವು. 2023ರಲ್ಲಿ ಮೈಸೂರಿನಲ್ಲಿ ಅಪ್ಪಾಜಿ ಅಸ್ತಿಯನ್ನು ಇಟ್ಟು ಸ್ಮಾರಕ ಮಾಡಿದ್ದೇವೆ’ ಎಂದು ಅವರು ಸಮಜಾಯಿಷಿ ನೀಡಿದರು.
ಧ್ರುವ ಸರ್ಜಾ ಬೇಸರ: ‘ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ. ವಿಷ್ಣು ಅಪ್ಪಾಜಿ ಸದಾ ಅಜರಾಮರ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು? ಆದರೂ ಸಹ ಈ ನಾಡಿನಲ್ಲಿ ಇಂಥ ಒಬ್ಬ ಕಲಾವಿದನಿಗೆ ಹೀಗೆ ಆಗಿದ್ದು ಖಂಡಿತ ಮನಸ್ಸಿಗೆ ನೋವುಂಟು ಮಾಡಿದೆ. ನಾನು ಒಬ್ಬ ಕನ್ನಡಿಗನಾಗಿ, ಕಲಾವಿದನಾಗಿ, ಈ ಒಂದು ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳ ಜೊತೆಗೆ ನಿಂತಿದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ’ ಎಂದು ಧ್ರುವ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬಾಲಣ್ಣ ಪುತ್ರಿ ವಿಷಾದ: ಹಿರಿಯ ನಟ ಬಾಲಕೃಷ್ಣ ಅವರಿಗೆ ಸೇರಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಈ ಘಟನೆಗೆ ಬಾಲಣ್ಣ ಪುತ್ರಿ ಗೀತಾ ಕೂಡ ಪ್ರತಿಕ್ರಿಯಿಸಿದ್ದಾರೆ. ‘ವಿಷ್ಣುವರ್ಧನ್ ನಮ್ಮ ತಂದೆಗೆ ಮಗನ ಥರ ಇದ್ದರು. ಅವರ ಸಮಾಧಿ ನೆಲಸಮ ಮಾಡಿರುವುದು ವಿಷಾದನೀಯ. ನಮ್ಮ ಕುಟುಂಬದ ಸದಸ್ಯರೊಬ್ಬರು ಇದಕ್ಕೆ ಕಾರಣ. ಆ ಭೂಮಿಯಲ್ಲಿ ನಮಗೂ ಹಕ್ಕಿದೆ. ನ್ಯಾಯಾಲಯದ ಮೂಲಕವೇ ಅವರಿಗೆ ಉತ್ತರಿಸುವೆ’ ಎಂದಿದ್ದಾರೆ.
ಪೊಲೀಸ್ ಕಾವಲು
ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮವನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಕಾವಲು ಹಾಕಲಾಗಿದೆ. ಗೇಟ್ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ. ‘ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮ ಖಂಡನೀಯ. ನಾಡಿನ ಸಾಂಸ್ಕೃತಿಕ ಪರಂಪರೆಗೆ ಮುಜುಗರ ತಂದಿದೆ. ಈ ರೀತಿಯ ಕೆಲಸಗಳು ಇನ್ನಾದರೂ ನಿಲ್ಲಬೇಕು. ಸಮಾಧಿ ಸ್ಥಳವನ್ನು ಅಭಿಮಾನಿಗಳಿಗೆ ಹಸ್ತಾಂತರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಟ ಸುದೀಪ್ ಆಕ್ರೋಶ
ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವುದಕ್ಕೆ ನಟ ಸುದೀಪ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ‘ಸಾಹಸ ಸಿಂಹ ವಿಷ್ಣುವರ್ಧನ್ ಎಂದರೆ ಎಂದೂ ಮುಗಿಯದ ಒಂದು ಅಭಿಮಾನ ಗೌರವ. ಅವರ ಸ್ಮಾರಕವನ್ನು ಒಡೆದು ಹಾಕಿದ್ದು ಒಂದು ದೇವಸ್ಥಾನವನ್ನು ಕೆಡವಿದಾಗ ಎಷ್ಟು ನೋವು ಆಗುತ್ತದೋ ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ನಮ್ಮದೇ ರಾಜ್ಯದಲ್ಲಿ ಒಬ್ಬೊಬ್ಬ ಕಲಾವಿದರಿಗೆ ಒಂದೊಂದು ರೀತಿ ಗೌರವ. ವಿಷ್ಣುವರ್ಧನ್ ಅಂಥ ಒಬ್ಬ ಮೇರು ನಟನಿಗೆ ರಾಜಧಾನಿಯಲ್ಲಿ ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ ಅವರ ಹೆಸರಿನಲ್ಲಿ ಒಂದು ಪ್ರಾರ್ಥನೆ ಮಾಡಲು ನಮ್ಮ ಬಳಿ ಜಾಗವಿಲ್ಲ ಎಂದರೆ ಇದು ಅತ್ಯಂತ ಖಂಡನೀಯ ವಿಷಯ.
ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ ನಾನೂ ಬರಲು ಸಿದ್ಧ. ಸರ್ಕಾರ ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಸ್ಮಾರಕವಾಗಿಸುತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ. ಜೈ ವಿಷ್ಣು ಸರ್’ ಎಂದು ಸುದೀಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.