ಸಮಾವೇಶ(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ಏಪ್ರಿಲ್ 23ರಂದು ಮಧ್ಯಾಹ್ನ 2.30ಕ್ಕೆ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ. ಸೋಮಶೇಖರ್, ‘ಈ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. ವಸಂತ ಮುರುಳಿ ಆಚಾರ್ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮರ, ಕಬ್ಬಿಣ, ಕಲ್ಲಿನ ಕೆತ್ತನೆ ಸೇರಿ ಪಂಚವೃತ್ತಿಗಳಲ್ಲಿ ಸಾಧನೆ ಮಾಡಿದ ಐವರು ಪುರುಷರಿಗೆ ‘ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್’ ಸೇರಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಕಲೆ, ಶಿಕ್ಷಣ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕಿಯರಿಗೆ ‘ವಿಶ್ವಕರ್ಮ ಕಲಾಸಿಂಧು’ ಸೇರಿ ಐದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ’ ಎಂದರು.
‘ನಮ್ಮ ಸಮುದಾಯದವರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ. ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ಸಮುದಾಯ ವಿಶ್ವಕರ್ಮ. ಸಮಾಜದಲ್ಲಿ ನಮ್ಮ ಸಮುದಾಯ ಪ್ರಬಲವಾಗಿದ್ದು, ನಮ್ಮ ಶಕ್ತಿ ಏನು ಎಂಬುದನ್ನು ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಗೆ ಮನದಟ್ಟು ಮಾಡಿಕೊಡಲು ಈ ಸಮಾವೇಶ ಸಹಕಾರಿಯಾಗಲಿದೆ. ಸಮುದಾಯಕ್ಕೆ ಅಗತ್ಯ ಸವಲತ್ತು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಈ ಸಮಾವೇಶದಲ್ಲಿ ವಿಶ್ವಕರ್ಮ ಹಾಗೂ ವಿವಿಧ ಸಮುದಾಯಗಳ ಮಠಾಧೀಶರು ಪಾಲ್ಗೊಳ್ಳುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಮುಖಂಡರು ಉಪಸ್ಥಿತರಿರುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.