ADVERTISEMENT

ರೇವಾ ವಿಶ್ವಸಂವಾದ: ಪರಿಹಾರೋಪಾಯದ ಚರ್ಚೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 16:27 IST
Last Updated 23 ಏಪ್ರಿಲ್ 2025, 16:27 IST
 ರೇವಾ ವಿಶ್ವಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ಹಾಗೂ ತೈವಾನ್‌ ನಿಯೋಗಗಳ ಸದಸ್ಯರು
 ರೇವಾ ವಿಶ್ವಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತ ಹಾಗೂ ತೈವಾನ್‌ ನಿಯೋಗಗಳ ಸದಸ್ಯರು   

ಯಲಹಂಕ: ರೇವಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರೇವಾ ವಿಶ್ವಸಂವಾದ-2025’ಕ್ಕೆ ಚಾಲನೆ ದೊರೆತಿದ್ದು, ಭಾರತ ಹಾಗೂ ತೈವಾನ್‌ ನಿಯೋಗಗಳ ಮಧ್ಯೆ ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಂವಾದಗಳು ನಡೆದವು.

ತೈವಾನ್‌ನ ತೈಪೆನಲ್ಲಿರುವ ಪ್ರಾಸ್ಪೆಕ್ಟ್ಸ್‌ ಫೌಂಡೇಷನ್‌ನ ಸಹಯೋಗದಲ್ಲಿ ಎರಡು ದಿನಗಳ ಈ ವಿಶ್ವಸಂವಾದ ಆಯೋಜಿಸಲಾಗಿದೆ.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ. ಶ್ಯಾಮರಾಜು, ‘ವಿಶ್ವದ ಎರಡು ಬಲಿಷ್ಠ ಪ್ರಜಾಪ್ರಭುತ್ವಗಳಾದ ಭಾರತ ಹಾಗೂ ತೈವಾನ್‌ ಸಮಾನ ದೃಷ್ಟಿಕೋನ ಹೊಂದಿವೆ. ಎರಡೂ ದೇಶಗಳ ವಿಷಯ ತಜ್ಞರು, ವಿದ್ವಾಂಸರು ಹಾಗೂ ನೀತಿ ನಿರೂಪಕರ ಮಧ್ಯದ ದ್ವಿಪಕ್ಷೀಯ ಮಾತುಕತೆಗೆ ಈ ವೇದಿಕೆ ಸಾಕ್ಷಿಯಾಗಿದೆ. ಎರಡು ದಿನಗಳ ಈ ಸಂವಾದದಲ್ಲಿ ಪ್ರಮುಖ ಜಾಗತಿಕ ಸಮಸ್ಯೆಗಳು ಹಾಗೂ ವಿವಿಧ ಕ್ಷೇತ್ರಗಳ ಸಹಯೋಗದೊಂದಿಗೆ ಒದಗಿಸಬಹುದಾದ ಪರಿಹಾರಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಹೇಳಿದರು. 

ADVERTISEMENT

ತೈವಾನ್‌ ನಿಯೋಗದ ನೇತೃತ್ವ ವಹಿಸಿಕೊಂಡಿರುವ ಪ್ರಾಸ್ಪೆಕ್ಟ್ಸ್‌ ಫೌಂಡೇಷನ್‌ನ ನಿರ್ದೇಶಕ ಐ-ಚುಂಗ್‌ಲೈ, ‘ಭಾರತ ಹಾಗೂ ತೈವಾನ್‌ನ ಬಲಿಷ್ಠ ಸಂಬಂಧಕ್ಕೆ ಈ ಸಂವಾದ ಸಾಕ್ಷಿಯಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಗಣನೀಯ ಪ್ರಾಬಲ್ಯವನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೀಗಾಗಿ, ಅವಿಷ್ಕಾರ ಹಾಗೂ ತಂತ್ರಗಾರಿಕೆ ಕ್ಷೇತ್ರದಲ್ಲಿ ಭಾರತ ಮತ್ತು ತೈವಾನ್‌ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿ, ಜಾಗತಿಕ ಪ್ರಗತಿಗೆ ಮುನ್ನುಡಿ ಬರೆಯಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

‌ವಿಶ್ವ ಸಂವಾದದಲ್ಲಿ ‘ಜಾಗತಿಕ ಶಕ್ತಿಗಳ ಮಧ್ಯದ ಸ್ಪರ್ಧೆ’, ‘ಪ್ರಾದೇಶಿಕ ಭದ್ರತೆ ಹಾಗೂ ಭಾರತ-ಥೈವಾನ್‌ನ ಪ್ರತಿಕ್ರಿಯೆ’, ‘ಸೈಬರ್‌ ಅಪಾಯದ ಪರಿಣಾಮಗಳು’ ಸೇರಿ ವಿವಿಧ ವಿಷಯಗಳ ಬಗ್ಗೆ ತಜ್ಞರು ವಿಚಾರ ಮಂಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.