ADVERTISEMENT

‘ನಗರದಲ್ಲೂ ರಚನೆಯಾಗಲಿವೆ ವಾರ್ಡ್‌ ಸಭಾ’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:15 IST
Last Updated 16 ಫೆಬ್ರುವರಿ 2019, 20:15 IST
   

ಬೆಂಗಳೂರು: ‘ಆಡಳಿತ ವಿಕೇಂದ್ರೀಕರಣ ಅರ್ಥಪೂರ್ಣಗೊಳಿಸಲು ವಾರ್ಡ್ ಸಮಿತಿಗಳನ್ನು ಸಧೃಡಗೊಳಿಸುವ ಜೊತೆಗೆ ಮತಗಟ್ಟೆವಾರು ವಾರ್ಡ್‌ ಸಭಾಗಳನ್ನು ರಚಿಸಿ ಸಶಕ್ತಗೊಳಿಸಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ವಾರ್ಡ್‌ ಸಮಿತಿ ಬಲಪಡಿಸುವ ಸಲುವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಸದ್ಯ ನವದೆಹಲಿಯಲ್ಲಿ ಮಾತ್ರ ಮೊಹಲ್ಲಾ ಸಭೆಗಳು ಅಸ್ತಿತ್ವದಲ್ಲಿವೆ.

‘1976ರ ಕರ್ನಾಟಕ ಪೌರಾಡಳಿತ ಕಾಯ್ದೆಯನ್ವಯ ರಚಿಸಿರುವ ನಿಯಮಗಳ ಪ್ರಕಾರ ಪ್ರತಿ ಮತಗಟ್ಟೆಗೊಂದು ವಾರ್ಡ್‌ ಸಭಾಗಳನ್ನು ರಚಿಸಬೇಕು. ಪ್ರತಿ ವಾರ್ಡ್‌ನಲ್ಲಿ ಸರಾಸರಿ 40 ಮತಗಟ್ಟೆಗಳಿರುತ್ತವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 8,515 ಮತಗಟ್ಟೆಗಳಿದ್ದು, ಅಷ್ಟು ವಾರ್ಡ್‌ ಸಭಾಗಳನ್ನು ರಚಿಸುವುದಕ್ಕೆ ಅವಕಾಶ ಇದೆ. ಸದ್ಯಕ್ಕೆ ವಾರ್ಡ್‌ ಸಮಿತಿಗಳನ್ನು ಸಕ್ರಿಯಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ. ಮುಂದಿನ ಹಂತದಲ್ಲಿ ವಾರ್ಡ್‌ ಸಭಾಗಳನ್ನೂ ಬಲಪಡಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಜನತಂತ್ರ ವ್ಯವಸ್ಥೆ ಬಲಪಡಿಸುವಲ್ಲಿ ವಾರ್ಡ್ ಸಮಿತಿ ಪಾತ್ರದ ಕುರಿತು ವಿವರಿಸಿದ ‘ಸಿಟಿಜನ್ಸ್‌ ಫಾರ್‌ ಬೆಂಗಳೂರು’ ಸಂಸ್ಥೆಯ ಸಹಸಂಸ್ಥಾಪಕ ಶ್ರೀನಿವಾಸ ಅಲವಿಲ್ಲಿ, ‘ವಾರ್ಡ್‌ ಸಮಿತಿಗಳಿಗಿರುವ ಅಧಿಕಾರ ಏನು ಎಂಬ ಬಗ್ಗೆ ಶೇ 80ರಷ್ಟು ನಾಗರಿಕರಿಗೆ ಇನ್ನೂ ಅರಿವಿಲ್ಲ. ಇತ್ತೀಚೆಗಷ್ಟೇ ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಈ ವ್ಯವಸ್ಥೆ ಈಗ ಅಂಬೆಗಾಲಿಡುತ್ತಿದೆ. ನಗರದ ಅಭಿವೃದ್ಧಿ ಕುರಿತ ಪ್ರಮುಖ ನಿರ್ಣಯಗಳನ್ನು ವಾರ್ಡ್‌ ಸಮಿತಿಗಳಲ್ಲೇ ಕೈಗೊಳ್ಳುವ ದಿನಗಳು ದೂರವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಂಸತ್ತು, ವಿಧಾನಸಭೆ ಅಥವಾ ಪಾಲಿಕೆ ಕಚೇರಿಗಳ ಆಡಳಿತ ಪ್ರಕ್ರಿಯೆಯಲ್ಲಿ ಜನರು ನೇರವಾಗಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಆದರೆ, ವಾರ್ಡ್‌ ಸಮಿತಿ ಇದಕ್ಕೆ ಅವಕಾಶ ಕಲ್ಪಿಸುತ್ತದೆ. ನವಬೆಂಗಳೂರನ್ನು ನಿರ್ಮಿಸಲು ಈ ಸಮಿತಿ ಮೂಲಕ ದಕ್ಕಿರುವ ಅಧಿಕಾರವನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.