
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ನೋಡಲು ಅನುವು ಮಾಡಿಕೊಟ್ಟಿದ್ದ ಪ್ರಕರಣದಲ್ಲಿ ಜೈಲು ವಾರ್ಡನ್ ಪ್ರಭುಶಂಕರ್ ಚೌಹಾಣ್ ಅವರನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ಯಲಹಂಕ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ವೊಬ್ಬರು ಆರೋಪಿಗಳನ್ನು ಜೈಲಿಗೆ ಬಿಡಲು ಇತ್ತೀಚೆಗೆ ಬಂದಿದ್ದರು. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ದರ್ಶನ್ ಅವರ ಭೇಟಿಗೆ ಅವಕಾಶ ಕಲ್ಪಿಸುವಂತೆ ಚೌಹಾಣ್ ಬಳಿ ಕೇಳಿಕೊಂಡಿದ್ದರು. ಸಿಸಿಟಿವಿ ಕ್ಯಾಮೆರಾ ಕಣ್ತಪ್ಪಿಸಿ, ಕಾನ್‌ಸ್ಟೆಬಲ್‌ಗೆ ದರ್ಶನ್ ಅವರನ್ನು ತೋರಿಸಿದ್ದರು. ಈ ವಿಚಾರ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರ ಗಮನಕ್ಕೆ ಬಂದಿತ್ತು. ದರ್ಶನ್ ಅವರ ಬಳಿ ಮಾಹಿತಿ ಪಡೆದಾಗ ‘ಯಾರೊ ಖಾಕಿ ಬಟ್ಟೆ ಧರಿಸಿದ್ದವರು ಬಂದು ಹೋಗಿದ್ದರು’ ಎಂದು ಹೇಳಿದರು. ಈ ಹೇಳಿಕೆ ಆಧರಿಸಿ ಆಂತರಿಕ ತನಿಖೆ ನಡೆಸಿದಾಗ ವಾರ್ಡನ್ ಪ್ರಭುಶಂಕರ್ ಚೌಹಾಣ್ ಕೃತ್ಯ ಎಸಗಿರುವುದು ಕಂಡು ಬಂದಿತ್ತು ಎಂದು ಮೂಲಗಳು ಹೇಳಿವೆ.
ವಾರ್ಡನ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ, ವರ್ಗಾವಣೆ ಮಾಡಲಾಗಿದೆ. ಜೊತೆಗೆ ಯಲಹಂಕದ ಪೊಲೀಸ್ ಕಾನ್‌ಸ್ಟೆಬಲ್ ವಿರುದ್ಧವೂ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.