ADVERTISEMENT

ತ್ಯಾಜ್ಯ ಎಸೆಯುವವರ ವಿರುದ್ಧ ವಿನೂತನ ಅಭಿಯಾನ: ಬೀದಿಗೆ ಕಸ, ಮನೆ ಮುಂದೆ ತಮಟೆ 

ಆರ್. ಮಂಜುನಾಥ್
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
ರಸ್ತೆಯಲ್ಲಿ ಕಸ
ರಸ್ತೆಯಲ್ಲಿ ಕಸ   

ಬೆಂಗಳೂರು: ರಸ್ತೆ–ಬೀದಿ, ಖಾಲಿ ನಿವೇಶನಗಳಲ್ಲಿ ಕಸ ಬಿಸಾಡುವವರ ಮನೆ ಮುಂದೆ ತ್ಯಾಜ್ಯ ಸುರಿದು, ತಮಟೆ ಹೊಡೆಯುವ ವಿನೂತನ ಅಭಿಯಾನ ನಡೆಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಸಿದ್ಧತೆ ನಡೆಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ರಸ್ತೆಗಳಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳು ಇಲ್ಲದಂತೆ ಮಾಡಲು ಸಾಕಷ್ಟು ಪ್ರಯತ್ನಪಡುತ್ತಿದ್ದರೂ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಪೂರ್ಣವಾಗಿ ನಿಂತಿಲ್ಲ. ಹೀಗಾಗಿ, ಬಿಎಸ್‌ಡಬ್ಲ್ಯುಎಂಎಲ್ ಸಿಬ್ಬಂದಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ, ಅವರ ಮನೆಯ ಮುಂದೆಯೇ ಕಸ ಸುರಿದು, ತಮಟೆ ಹೊಡೆದು ಅರಿವು ಮೂಡಿಸಲು ಮುಂದಾಗಿದೆ.

198 ವಾರ್ಡ್‌ಗಳಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳ ಬಗ್ಗೆ ಪೌರಕಾರ್ಮಿಕರು ಹಾಗೂ ತ್ಯಾಜ್ಯ ಸಂಗ್ರಹಿಸುವ ಆಟೊ ಸಿಬ್ಬಂದಿಗೆ ಮಾಹಿತಿ ಇದೆ. ಇವರ ಮಾಹಿತಿಯನ್ನು ಆಧರಿಸಿ, ಕಸ ಎಸೆಯುವವರ ವಿಡಿಯೊ ಮಾಡಿ, ಅವರ ವಿಳಾಸವನ್ನು ಪತ್ತೆ ಮಾಡಲಾಗುತ್ತದೆ. ದೃಶ್ಯ–ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಆ ವ್ಯಕ್ತಿಯ ಮನೆಗೆ ಹೋಗಿ ದಂಡ ವಿಧಿಸಲಾಗುತ್ತದೆ. ಅಷ್ಟಕ್ಕೆ ಸುಮ್ಮನಾಗದೆ, ಎಲ್ಲರಿಗೂ ಅರಿವಾಗುವಂತೆ ತಮಟೆ ಬಾರಿಸಲಾಗುತ್ತದೆ. ತ್ಯಾಜ್ಯವನ್ನು ಸುರಿದು ಅದರಿಂದ ಎಂತಹ ಸಮಸ್ಯೆಯಾಗುತ್ತದೆ ಎಂಬುದನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ಈ ಅಭಿಯಾನವನ್ನು ಸೆಪ್ಟೆಂಬರ್‌ ಅಂತ್ಯಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ.

ADVERTISEMENT

‘ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ಬಗ್ಗೆ ಮಾರ್ಷಲ್‌ಗಳು ಸೇರಿದಂತೆ ನಮ್ಮ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾಕಷ್ಟು ಜನರ ಮಾಹಿತಿ ನಮ್ಮ ಬಳಿ ಇದೆ. ಅವರ ಮನೆ ಮುಂದೆ ತಮಟೆ ಬಾರಿಸುವ ಅಭಿಯಾನ ಆರಂಭಿಸಲಾಗುತ್ತದೆ. ಜನರು ಸಮಸ್ಯೆ ಅರಿತು ನಗರದ ಸ್ವಚ್ಛತೆಗೆ ಕೈಜೋಡಿಸಬೇಕು ಎಂಬುದು ನಮ್ಮ ಗುರಿಯೇ ಹೊರತು ಅವರಿಗೆ ಯಾವುದೇ ರೀತಿಯಲ್ಲಿ ಮುಜುಗರ ಉಂಟು ಮಾಡುವ ಉದ್ದೇಶವಿಲ್ಲ’ ಎಂದು ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ತಿಳಿಸಿದರು.

₹2 ಸಾವಿರ ದಂಡ
‘ರಸ್ತೆ, ನಿವೇಶಗಳಲ್ಲಿ ಕಸ ಎಸೆಯುವವರಿಗೆ ಕನಿಷ್ಠ ₹2 ಸಾವಿರ ದಂಡ ವಿಧಿಸಲಾಗುತ್ತಿದೆ. ಈ ರೀತಿ ದಂಡ ಪಾವತಿಸಿದವರ ಚಿತ್ರವನ್ನು ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಇಂತಹ ತಪ್ಪನ್ನು ಅವರು ಮತ್ತೆ ಮಾಡಬಾರದು ಎಂಬುದು ನಮ್ಮ ಆಶಯ’ ಎಂದರು.

ತ್ಯಾಜ್ಯ ನೀಡದ್ದರೆ ನೋಟಿಸ್‌!

‘198 ವಾರ್ಡ್‌ಗಳಲ್ಲಿ ಪ್ರತಿನಿತ್ಯ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಆಟೊ ಸಿಬ್ಬಂದಿಗೆ ಯಾವ ಮನೆಯವರು ತ್ಯಾಜ್ಯ ನೀಡುತ್ತಿಲ್ಲ ಎಂಬುದು ಗೊತ್ತಿರುತ್ತದೆ. ಅವರಿಂದ ಮಾಹಿತಿ ಪಡೆದು ಅಂತಹ ಮನೆಗಳನ್ನು ವಾರ್ಡ್‌ವಾರು ಪಟ್ಟಿ ಮಾಡಿಕೊಳ್ಳಲಾಗುತ್ತಿದೆ. ಮನೆಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ತಿಳಿಸಿದರು.

‘ನಗರದಲ್ಲಿ ಉದ್ಯೋಗಕ್ಕೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ಅವರು ಮನೆಯಿಂದ ಹೊರಡುವುದಕ್ಕೆ ಮೊದಲೇ ತ್ಯಾಜ್ಯ ಸಂಗ್ರಹ ಮಾಡುವುದಕ್ಕೆ ಅನುವಾಗಲು ಆಟೊಗಳ ಸಮಯವನ್ನೂ ಬದಲಾಯಿಸಲಾಗಿದೆ. ಆದರೂ ತ್ಯಾಜ್ಯ ನೀಡದೆ ಇದ್ದರೆ ಅವರು ರಸ್ತೆಗಳಲ್ಲೇ ಅದನ್ನು ಎಸೆಯುತ್ತಿದ್ದಾರೆ ಎಂದು ಭಾವಿಸಲಾಗುತ್ತದೆ. ಅವರು ತಾವೇ ತ್ಯಾಜ್ಯ ಸಂಸ್ಕರಿಸುತ್ತಿದ್ದೇವೆ ಎಂಬುದಾದರೆ ಅದನ್ನು ಸಾಬೀತುಪಡಿಸಬೇಕು’ ಎಂದು ಹೇಳಿದರು.

ಜನರಲ್ಲಿ ಅರಿವು ಅಗತ್ಯ: ಕರೀಗೌಡ

‘ನಗರದ ಸ್ವಚ್ಛತೆ ಕಾ‍ಪಾಡುವಲ್ಲಿ ಅದರಲ್ಲೂ ಎಲ್ಲೂ ಕಸ ಇಲ್ಲದಂತೆ ನೋಡಿಕೊಳ್ಳಲು ನಾಗರಿಕರ ಸಹಕಾರ ಬೇಕು. ಕಸ ತೆಗೆದುಕೊಳ್ಳಲು ಮನೆ ಬಾಗಿಲಿಗೆ ನಮ್ಮ ಸಿಬ್ಬಂದಿ ಹೋಗುತ್ತಾರೆ. ಅವರಿಗೆ ತ್ಯಾಜ್ಯ ನೀಡದೆ ಬೀದಿಯಲ್ಲಿ ಬಿಸಾಡಿದರೆ ನಗರದ ಸೌಂದರ್ಯ ಹಾಳಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ಜನರು ತಮ್ಮ ಜವಾಬ್ದಾರಿಯನ್ನು ಅರಿತು ನಮ್ಮೊಂದಿಗೆ ಸಹಕರಿಸಬೇಕು. ತ್ಯಾಜ್ಯ ಸಂಗ್ರಹ ವಿಲೇವಾರಿಯಲ್ಲಿ  ತೊಂದರೆ ಸಮಸ್ಯೆ ಆಗುತ್ತಿದ್ದರೆ ವಾಟ್ಸ್‌ ಆ್ಯಪ್‌ (9448197197) ಸಂದೇಶ ಕಳುಹಿಸಬೇಕು’ ಎಂದು ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.