ADVERTISEMENT

ಪರಿಣಾಮ, ಅವಲೋಕನ ಮತ್ತು ಪರಿಹಾರದ ಹುಡುಕಾಟ

ನಾಗರತ್ನ ಜಿ.
Published 5 ನವೆಂಬರ್ 2019, 19:45 IST
Last Updated 5 ನವೆಂಬರ್ 2019, 19:45 IST
‘ರೀ ಇಮಾಜಿನ್‌ ವೇಸ್ಟ್‌’ ಸಂಘಟನೆಯ ಗಾಯತ್ರಿ ಎಚ್‌.ವಿ ಅವರೊಂದಿಗೆ ಮಹಿಳೆಯರು
‘ರೀ ಇಮಾಜಿನ್‌ ವೇಸ್ಟ್‌’ ಸಂಘಟನೆಯ ಗಾಯತ್ರಿ ಎಚ್‌.ವಿ ಅವರೊಂದಿಗೆ ಮಹಿಳೆಯರು   

ಪ್ರತಿ ನಿತ್ಯ ನಾವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ನಿರ್ವಹಣೆಯೂ ಒಂದು ರೀತಿ ತಲೆಬಿಸಿಯಾಗಿದೆ. ಈ ತ್ಯಾಜ್ಯ ವಿಲೇವಾರಿಯಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಕೈಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ವಿಂಗಡಣೆ ಸಾದ್ಯವಾಗುತ್ತಿಲ್ಲ.

ಇಲ್ಲೊಂದು ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ತಾಂತ್ರಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ತಾಂತ್ರಿಕ ಪರಿಹಾರದ ಜೊತೆಗೆ ವ್ಯವಹಾರಿಕವಾಗಿ ಅಭಿವೃದ್ಧಿ ಪಡಿಸುವ ಮೂಲಕ ಆರ್ಥಿಕವಾಗಿಯೂ ಸುಧಾರಿಸುವ ನಿಟ್ಟಿನಲ್ಲಿ ಇವರು ಪ್ರತಿ ವರ್ಷ ವಿವಿಧ ತ್ಯಾಜ್ಯವನ್ನು ಕೇಂದ್ರೀಕರಿಸಿ ಪರಿಹಾರ ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.

ಗಾಯತ್ರಿ ಎಚ್‌.ವಿ ಎಂಬುವವರು ‘ರೀ ಇಮಾಜಿನ್‌ ವೇಸ್ಟ್‌’ ಸಂಘಟನೆಯನ್ನು ಮೊದಲಿಗೆ ಪ್ರಾರಂಭಿಸಿ, ತ್ಯಾಜ್ಯದ ಸುತ್ತಲಿನ ವಿವಿಧ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಹುಡುಕುವ ಸಲುವಾಗಿ ತ್ಯಾಜ್ಯ ಹ್ಯಾಕಥಾನ್‌ಗಳ ವಿವಿಧ ಆವೃತಿಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದಾರೆ. ಇವರು ಈ ವರ್ಷ ವೈದ್ಯಕೀಯ ತ್ಯಾಜ್ಯದ ಬಗ್ಗೆ ಗಮನಹರಿಸಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಬೆಂಗಳೂರಿನ ಐಐಎಂ ಸಂಸ್ಥೆಯ ಆವರಣದಲ್ಲಿ ನವೆಂಬರ್‌ 9ರಿಂದ 17ರ ವರೆಗೆಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಪೊರೇಟ್‌ ಕಂಪನಿಗಳು ಈ ಕಾರ್ಯಕ್ರಮಕ್ಕೆ ಸಾಥ್‌ ನೀಡಲಿವೆ.

ADVERTISEMENT

ಏನಿದು ಕಾರ್ಯಕ್ರಮ

ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 200 ಜನ ಭಾಗವಹಿಸುತ್ತಾರೆ. ವಿವಿಧ ಹುದ್ದೆಗಳಲ್ಲಿರುವ ಜನರು, ವಿವಿಧ ರಾಜ್ಯಗಳಿಂದ ಭಾಗವಹಿಸಿ ತಮ್ಮ ಆಲೋಚನೆಗಳನ್ನು ಇಲ್ಲಿ ವ್ಯಕ್ತಪಡಿಸುತ್ತಾರೆ. ಇದು ಮೊದಲಿಗೆ ಹ್ಯಾಕಥಾನ್‌ನಿಂದ ಪ್ರಾರಂಭವಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾದವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತಾರೆ. ಪ್ರತ್ಯಕ್ಷದರ್ಶಿಗಳು ತಾವು ಖುದ್ದಾಗಿ ವೀಕ್ಷಿಸಿದ ಸಮಸ್ಯೆಗಳನ್ನು ಮತ್ತು ಆ ಸಮಸ್ಯೆಗೆ ಕ್ರಮ ತೆಗೆದುಕೊಳ್ಳಬೇಕು ಎನಿಸಿದ್ದಲ್ಲಿ, ಈ ಕುರಿತು ತಮ್ಮದೇ ಆದ ಪರಿಹಾರೋಪಾಯಗಳನ್ನು ಚರ್ಚಿಸುತ್ತಾರೆ. ಸಮಾನ ಮನಸ್ಥಿತಿ ಉಳ್ಳವರನ್ನು ಅಥವಾ ಆ ಸಮಸ್ಯೆಗೆ ಪರಿಹಾರ ಸಿಗಲೇಬೇಕು ಎಂದು ಹೇಳುವವರನ್ನು ಒಂದೊಂದು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಈ ಎಲ್ಲಾ ಗುಂಪುಗಳಿಂದ ಸುಮಾರು 30 ರಿಂದ 40 ಸಮಸ್ಯೆಗೆ ಪರಿಹಾರಗಳು ಹೊರಹೊಮ್ಮುತ್ತವೆ. ಅವುಗಳಲ್ಲಿ ಸೂಕ್ತ ಮತ್ತು ಪ್ರಮುಖವಾದವುಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ. ನಂತರ ಆ ಸಮಸ್ಯೆಯನ್ನು ಪರಿಹರಿಸಲು 45 ದಿನಗಳ ಕಾಲ ಶ್ರಮಿಸಲಾಗುತ್ತದೆ.

ಸ್ಥಳ ವೀಕ್ಷಣೆ

ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದು ಥೀಮ್‌ ಜೊತೆಗೆ ಸ್ಥಳ ಭೇಟಿ ನೀಡಲಾಗುತ್ತದೆ. ಉದಾಹರಣೆಗೆ ಇ–ತ್ಯಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ವೀಕ್ಷಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು. ಮಧ್ಯಮ ವರ್ಗದ ಜನರು ತ್ಯಾಜ್ಯ ಕೇಬಲ್‌ಗಳನ್ನು ಮಾರಿ ಜೀವನ ನಡೆಸುತ್ತಾರೆ. ಮೇಲಿನ ಪ್ಲಾಸ್ಟಿಕ್‌ ತೆಗೆಯಲು ಸಾಧ್ಯವಾಗದ ಸಮಯದಲ್ಲಿ ಅದನ್ನು ಸುಡುವ ಮೂಲಕ ಒಳಗಿರುವ ತಂತಿಯನ್ನು ತೆಗೆದು ಮಾರಿಕೊಳ್ಳುತ್ತಾರೆ. ಪ್ಲಾಸ್ಟಿಕ್‌ ಸುಡುವುದರಿಂದ ಅನೇಕ ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಅಲ್ಲದೆ ಅಲ್ಲಿನ ಮಕ್ಕಳೂ ಹೆಚ್ಚಾಗಿ ಈ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಈ ರೀತಿ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಚರ್ಚಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ.

ಈ ಭಾರಿ ವೈದ್ಯಕೀಯ ತ್ಯಾಜ್ಯವನ್ನು ಗುರಿಯಾಗಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಆಸ್ಪತ್ರೆಗಳು, ಡಯಾಗ್ನೋಸ್ಟಿಕ್‌ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಬಯೋಮೆಡಿಕಲ್‌ ತ್ಯಾಜ್ಯಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವುದರಿಂದ ತಾವೇ ಖುದ್ದಾಗಿ ವೀಕ್ಷಿಸಿ, ಸಮಸ್ಯೆಗಳನ್ನು ಆಲಿಸಬಹುದಾಗಿದೆ. ಬಯೋಮೆಡಿಕಲ್‌ ಉತ್ಪಾದಕರು, ನಿರ್ವಾಹಕರು, ಸಾಗಣೆದಾರರು ಮತ್ತು ವಿತರಣಾಗಾರರನ್ನು ಭೇಟಿ ಮಾಡಿ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ನೈಜ ಚಿತ್ರಣವನ್ನು ಪಡೆಯಲು ಸಂವಹನ ನಡೆಸಲಾಗುತ್ತದೆ.

ಪೌರಕಾರ್ಮಿಕರು ಭಾಗಿ

ಪ್ರತಿ ನಿತ್ಯ ಕಸವನ್ನು ನಿರ್ವಹಣೆ ಮಾಡುವ ಪೌರ ಕಾರ್ಮಿಕರು ಇಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಇವರಿಗೆ ಕಸದ ಸಮಸ್ಯೆ ಬಗ್ಗೆ ಮಾಹಿತಿ ಇರುವ ಕಾರಣ ಕಾರ್ಯಕ್ರಮದಲ್ಲಿ ಮೂಡುವ ಪ್ರಶ್ನೋತ್ತರಗಳು, ಯೋಜನೆ ಪರಿಣಾಮಗಳ ಸಾಧಕ ಭಾದಕವನ್ನು ಪೂರ್ವಾಪರ ಚಿಂತಿಸಿ ಸೂಕ್ತ ಸಲಹೆಗಳನ್ನು ನೀಡುತ್ತಾರೆ, ವಿದ್ಯಾರ್ಥಿಗಳೂ ಭಾಗವಹಿಸಿ ಚಟುವಟಿಕೆಗಳಲ್ಲಿ ನಿರತರಾಗುವುದು ವಿಶೇಷ.

ಉತ್ತೇಜನಕ್ಕಾಗಿ ಬಹುಮಾನ

ತ್ಯಾಜ್ಯ ಸಮಸ್ಯೆಗಳನ್ನು ಅವಲೋಕಿಸಿ ಅವುಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಉತ್ತಮ ಪರಿಹಾರ ಅಥವಾ ಸಲಹೆ ನೀಡಿದ ಮೂರು ಮಂದಿಗೆ ತಲಾ ₹2 ಲಕ್ಷದವರೆಗೆ ಬಹುಮಾನವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಇತರರು ಯಾವುದಾದರು ಸಮಸ್ಯೆಗಳನ್ನು ನಿವಾರಿಸುತ್ತೇವೆ ಎಂದು ಸ್ವತಃ ಮುಂದೆ ಬಂದರೆ ಅವರಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದ್ದಲ್ಲಿwww.reimaginewaste.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.