ADVERTISEMENT

ಬೇಸಿಗೆ ಆರಂಭದಲ್ಲೇ ಎದ್ದಿದೆ ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
ನೀರಿಗೆ ಹಾಹಾಕಾರ
ನೀರಿಗೆ ಹಾಹಾಕಾರ   

ಬೊಮ್ಮನಹಳ್ಳಿ: ಬೇಸಿಗೆ ಈಗತಾನೆ ಕಾಲಿಟ್ಟಿದೆ. ಆದರೆ, ಅದಾಗಲೇ ತಾಪಮಾನ ದಾಖಲೆಯ ಮಟ್ಟವನ್ನು ತಲುಪುತ್ತಿದ್ದು, ನೀರಿನ ಸಮಸ್ಯೆ ಕೂಡ ಅದರ ಬೆನ್ನೇರಿಕೊಂಡು ಬಂದಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಲ್ಲಿ ಸಮರ್ಪಕ ನೀರು ಪೂರೈಕೆಯಿಲ್ಲದೆ ಹಾಹಾಕಾರ ಎದ್ದಿದೆ.

ಬೊಮ್ಮನಹಳ್ಳಿ ಪ್ರದೇಶದಲ್ಲಿ ಸದಾ ಕಾಡುವ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಪ್ರತಿ ವರ್ಷವೂ ಉಲ್ಬಣಗೊಳ್ಳುತ್ತದೆ. ವಿವಿಧ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿದ್ದರೂ ನೀರಿನ ಬರ ತಪ್ಪಿಲ್ಲ. ಬಿಬಿಎಂಪಿಗೆ ಸೇರ್ಪಡೆ ಆದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂಬ ಜನರ ನಿರೀಕ್ಷೆ ದಶಕದ ನಂತರವೂ ನಿರೀಕ್ಷೆಯಾಗಿಯೇ ಉಳಿದಿದೆ.

ಬೊಮ್ಮನಹಳ್ಳಿ ವಲಯದ ಬಹಳಷ್ಟು ಪ್ರದೇಶಗಳಿಗೆ ಕಾವೇರಿ ನೀರಿನ ಪೈಪ್‌ಲೈನ್ ಹಾಕಲಾಗಿದ್ದರೂ ಇನ್ನೂ ಪೂರೈಕೆ ಮಾಡುತ್ತಿಲ್ಲ. ಕೆಲವೆಡೆ ವಾರಕ್ಕೆ ಎರಡು ದಿನ ನೀರು ಬಿಡಲಾಗುತ್ತಿದೆ. ಅದೂ ಒಂದು ಗಂಟೆ ಮಾತ್ರ! ಕಾವೇರಿ ನೀರಿನ ಸಂಪರ್ಕ ಇಲ್ಲದಿರುವ ಕಡೆ ಟ್ಯಾಂಕರ್ ನೀರೇ ಗತಿ ಎಂಬಂತಾಗಿದೆ.

ADVERTISEMENT

‘ಬಂಡೇಪಾಳ್ಯದಲ್ಲಿ ಹತ್ತು ದಿನಕ್ಕೊಮ್ಮೆ ನೀರು ಸಿಗುತ್ತಿದೆ, ಒಂದು ಗಂಟೆ ಮಾತ್ರ ನೀರು ಬಿಡುತ್ತಾರೆ, ಇದು ಏನಕ್ಕೂ ಸಾಲುವುದಿಲ್ಲ’ ಎನ್ನುತ್ತಾರೆ ಬಂಡೇಪಾಳ್ಯದ ಗೃಹಿಣಿ ರೇಖಾ ರಾಮಚಂದ್ರ.

ಟ್ಯಾಂಕರ್ ನೀರನ್ನೇ ಅವಲಂಬಿಸಿರುವ ಕುಟುಂಬವೊಂದು ತಿಂಗಳಿಗೆ 3000 ದಿಂದ 4000 ರೂಪಾಯಿ ನೀರಿಗಾಗಿಯೇ ಮೀಸಲಿಡಬೇಕಿದೆ. ಟ್ಯಾಂಕರ್ ನೀರು ಕುಡಿಯಲು ಯೋಗ್ಯವಲ್ಲದ ಕಾರಣ, ಕುಡಿಯುವ ನೀರಿಗಾಗಿ ತಿಂಗಳಿಗೆ 250 ರೂಪಾಯಿ ತೆತ್ತು ಕ್ಯಾನ್ ನೀರು ತರಬೇಕು. ಇದರ ಶುದ್ಧತೆಯ ಬಗ್ಗೆ ಯಾವುದೇ ಖಾತ್ರಿ ಇಲ್ಲ.

ಟ್ಯಾಂಕರ್ ನೀರಿಗೆ 1000 ರೂಪಾಯಿ!: ಮಳೆಗಾಲದಲ್ಲಿ 6 ಸಾವಿರ ಲೀಟರ್‌ನ ಟ್ಯಾಂಕರ್ ನೀರಿಗೆ 500 ರೂಪಾಯಿ ಇದ್ದದ್ದು, ನೀರಿನ ಕೊರತೆ ಇದೆ ಎಂಬ ಕಾರಣಕ್ಕೆ ಈಗ 1000ದಿಂದ 1200 ರೂಪಾಯಿ ಕೊಟ್ಟು ನೀರು ಕೊಂಡುಕೊಳ್ಳಬೇಕಿದೆ. ಕಡಿಮೆ ನೀರು ಹಾಕಿ, ಇದರಲ್ಲೂ ಮೋಸ ಮಾಡುವವರೂ ಇದ್ದಾರೆ. ಜತೆಗೆ ದುಡ್ಡು ಕೊಟ್ಟರೂ ಬೇಕಾದ ಸಮಯಕ್ಕೆ ನೀರು ಸಿಗುವುದಿಲ್ಲ ಎಂಬುದು ನಿವಾಸಿಗಳ ಅಳಲು.

ಬೇಗೂರು ಕೆರೆ ನೀರು ಖಾಲಿ: ಬೇಗೂರು ಕೆರೆ ತೀರದ ಪ್ರದೇಶಗಳಾದ ಚಿಕ್ಕಬೇಗೂರು, ವಿಶ್ವಪ್ರಿಯ ಬಡಾವಣೆ, ಮೈಕೊ ಬಡಾವಣೆ, ಲಕ್ಷ್ಮಿ ಲೇಔಟ್, ಗಾರ್ವೆಬಾವಿಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದೆ. ದೊಡ್ಡ ಬೇಗೂರು ಕೆರೆಯ ಅಭಿವೃದ್ಧಿಗಾಗಿ ಮೂರು ತಿಂಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲು ನೀರನ್ನು ಖಾಲಿ ಮಾಡಲಾಗಿತ್ತು. ಕಾಮಗಾರಿ ವಿಳಂಬವಾಗುತ್ತಿದ್ದು, ಇದರ ಪರಿಣಾಮ ಕೆರೆ ತೀರದ ಪ್ರದೇಶಗಳಲ್ಲಿ ಅಂತರ್ಜಲ ಕುಸಿದು, ಶೇಕಡ 80ರಷ್ಟು ಕೊಳವೆಬಾವಿಗಳು ಬತ್ತಿ ಹೋಗಿವೆ. ಇದರಿಂದಾಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ.

‘ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ 18 ಕುಟುಂಬಗಳು ವಾಸವಿವೆ. ನಮಗೆ ಕಾವೇರಿ ನೀರಿನ ಸಂಪರ್ಕ ಇಲ್ಲ. ಟ್ಯಾಂಕರ್ ನೀರು ಬಳಸುತ್ತೇವೆ. ತಿಂಗಳಿಗೆ 37,000 ರೂಪಾಯಿ ನೀರಿಗಾಗಿ ಖರ್ಚು ಮಾಡುತ್ತಿದ್ದೇವೆ’ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಗೃಹಿಣಿ ಪೂರ್ಣಿಮಾ.

ಖಾಸಗಿ ಟ್ಯಾಂಕರ್ ನೀರು ಪೂರೈಕೆದಾರರು ಕೂಡ ಚಂದಾಪುರ, ಗೊಟ್ಟಿಗೆರೆ ಸೇರಿದಂತೆ ದೂರದ ಪ್ರದೇಶಗಳಿಂದ ನೀರು ತರಬೇಕಿದೆ, ಹೀಗಾಗಿ ‘ದರ ಹೆಚ್ಚು ಮಾಡದೇ ಬೇರೆ ದಾರಿ ಇಲ್ಲ’ ಎನ್ನುತ್ತಾರೆ ಟ್ಯಾಂಕರ್ ನೀರು ಪೂರೈಕೆದಾರ ಲೋಕನಾಥನ್.

ಗೊಟ್ಟಿಗೆರೆಯಲ್ಲಿ ಹೊಸದಾಗಿ ಜಿಎಲ್ಆರ್: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಕೆಲವೆಡೆ ಮುಗಿದಿದ್ದರೆ, ಮತ್ತೆ ಕೆಲವೆಡೆ ಪ್ರಗತಿಯಲ್ಲಿದೆ. ಪೈಪ್‌ಲೈನ್ ಹಾಕಿರುವ ಕಡೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ ಸದ್ಯ ಪೂರೈಕೆ ಆಗುತ್ತಿರುವ ಪ್ರದೇಶಗಳಿಗೆ ಸ್ವಲ್ಪ ಕಡಿತ ಮಾಡಿ ನೀಡಲಾಗುತ್ತಿದೆ.

ಗೊಟ್ಟಿಗೆರೆ ಬಳಿ ಜಿಎಲ್ಆರ್ ಘಟಕ ಸ್ಥಾಪನೆಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಕೆಲ ದಿನಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರೆವೇರಿಸಿದ್ದರು. ಅದು ಪೂರ್ಣಗೊಳ್ಳಲು ಎರಡು ವರ್ಷವಾದರೂ ಬೇಕು ಎನ್ನುತ್ತಾರೆ ಎಇಇ ವಿನಯಕುಮಾರಿ. ಬೇಸಿಗೆ ಎದುರಿಸಲು ಏನಾದರೂ ವಿಶೇಷ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.