ಬೆಂಗಳೂರು: ‘ತಿಪ್ಪಗೊಂಡನಹಳ್ಳಿ ಜಲಾಶಯದ 10 ಕಿ.ಮೀ ವ್ಯಾಪ್ತಿಯಲ್ಲಿ ನಗರೀಕರಣ ಮತ್ತು ಕೈಗಾರೀಕರಣ ನಿಯಂತ್ರಿಸಿ, ನೀರು ಸಂಗ್ರಹ ಹೆಚ್ಚಿಸಿ, ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು’ ಎಂದು ತಜ್ಞರು ಅಭಿಪ್ರಾಯಪಟ್ಟರು.
ಆಮ್ ಆದ್ಮಿ ಪಾರ್ಟಿ– ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ತಿಪ್ಪಗೊಂಡನಹಳ್ಳಿ ಜಲಾಶಯ ರಕ್ಷಿಸಿ, ಬೆಂಗಳೂರು ಉಳಿಸಿ’ ವಿಚಾರ ಸಂಕಿರಣದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡಿದರೆ ವೆಚ್ಚ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
‘ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನರುಜ್ಜೀವಗೊಳಿಸಲು ಇಸ್ರೊ ಸಂಸ್ಥೆ ಹಾಗೂ ಕೆಲವು ಸಂಸ್ಥೆಗಳು ಸವಿಸ್ತಾರವಾದಂತಹ ವರದಿ ನೀಡಿದ ದಶಕ ಕಳೆದಿದೆ. ಸರ್ಕಾರ ಈ ಜಲಾಶಯದ ಪುನರುಜ್ಜೀವನಕ್ಕೆ ಯಾವುದೇ ಯೋಜನೆ ರೂಪಿಸದೇ ಬೆಂಗಳೂರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಬೆಂಗಳೂರು ಜಲಮಂಡಳಿಯ ನಿವೃತ್ತ ಎಂಜಿನಿಯರ್ ಎಂ.ಎನ್.ತಿಪ್ಪೇಸ್ವಾಮಿ ಹೇಳಿದರು.
‘ನಗರಕ್ಕೆ ನೀರಿನ ಲಭ್ಯತೆಯ ಸಾಮರ್ಥ್ಯದ ಮೇಲೆ ಅಭಿವೃದ್ಧಿ ಆಗಬೇಕಿದೆ. ಆದರೆ ನೀರಿನ ಲಭ್ಯತೆಯ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುತ್ತಿರುವುದು ರಾಜಕಾರಣಿಗಳ ದುರಾಸೆಯ ಪರಮಾವಧಿಯಾಗಿದೆ’ ಎಂದು ಸಿವಿಕ್– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ದೂರಿದರು.
‘ಬೆಂಗಳೂರು ನಗರಕ್ಕೆ ‘ನೀರಿನ ನೀತಿ’ಯನ್ನು ಕೂಡಲೇ ಜಾರಿಗೊಳಿಸಬೇಕು. ಬೆಂಗಳೂರಿನ ಕಾಲು ಭಾಗ ಮಾತ್ರ ಕಾವೇರಿ ನದಿಯನ್ನು ಆಶ್ರಯಿಸಬೇಕು. ಮುಕ್ಕಾಲು ಭಾಗ ಬೆಂಗಳೂರಿಗೆ ದಕ್ಷಿಣ ಪಿನಾಕಿನಿ ಹಾಗೂ ಸ್ಥಳೀಯ ಕೆರೆಗಳು, ಬಾವಿ, ಅಂತರ್ಜಲ ವ್ಯವಸ್ಥೆಗಳಿಂದ ನೀರನ್ನು ಸ್ವಯಂ ನಾವೇ ಪೂರೈಕೆ ಮಾಡಿಕೊಳ್ಳಬಹುದಾಗಿದೆ’ ಎಂದು ಮಳೆನೀರು ತಜ್ಞ ವಿಶ್ವನಾಥ್ ಹೇಳಿದರು.
‘ತಿಪ್ಪಗೊಂಡನಹಳ್ಳಿ ಜಲಾಶಯ ಪ್ರದೇಶದಲ್ಲಿ ಈ ಮೊದಲು ಆನೆ ಕಾರಿಡಾರ್ ಇತ್ತು. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಆನೆಗಳು ಸಂಪೂರ್ಣ ಮಾಯವಾಗಿವೆ. ದೂರದಿಂದ ಪಕ್ಷಿ ಸಂಕುಲಗಳು ಇತ್ತೀಚಿನ ದಿನಗಳಲ್ಲಿ ವಲಸೆ ಬರುತ್ತಿಲ್ಲ. ನೀರು ಕೋಳಿಗಳೂ ನಾಪತ್ತೆಯಾಗಿವೆ. ಪ್ರಾಣಿ ಪಕ್ಷಿ ಸಂಕುಲಗಳಿಗೆ ಮಾರಕವಾಗಿರುವ ಚಟುವಟಿಕೆಗಳು ಜಲಾಶಯದ ಸುತ್ತಮುತ್ತ ಎದ್ದು ಕಾಣುತ್ತಿದೆ’ ಎಂದು ಪ್ರಾಣಿ ಸಂರಕ್ಷಕ ಸಿಂಹಾದ್ರಿ ತಿಳಿಸಿದರು.
‘ತಿಪ್ಪಗೊಂಡನಹಳ್ಳಿಯ ಅಚ್ಚುಕಟ್ಟು ಪ್ರದೇಶವನ್ನು ಎರಡು ಕಿ.ಮೀನಿಂದ 30 ಮೀಟರ್‌ಗೆ ಇಳಿಸಿರುವುದು ದುರಂತದ ಸಂಗತಿ’ ಎಂದು ಪರಿಸರ ಕಾರ್ಯಕರ್ತ ರಾಮ್‌ಪ್ರಸಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.