ADVERTISEMENT

ವಾರಾಂತ್ಯ: ಗ್ರಾಹಕರ ಸಂಖ್ಯೆ ಏರಿಕೆ

ಶನಿವಾರ ಸಂಜೆ ಬಳಿಕ ಮಾಲ್‍ಗಳಲ್ಲಿ ತುಸು ಹೆಚ್ಚಳವಾದ ಖರೀದಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 22:04 IST
Last Updated 13 ಜೂನ್ 2020, 22:04 IST
ನಗರದ ಗರುಡಾ ಮಾಲ್‍ನಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು -  – ಪ್ರಜಾವಾಣಿ ಚಿತ್ರ
ನಗರದ ಗರುಡಾ ಮಾಲ್‍ನಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು -  – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾರ್ಯಾರಂಭಗೊಂಡು ನಾಲ್ಕೈದು ದಿನಗಳಾದರೂ ಜನರಿಲ್ಲದೆ ಭಣಗುಡುತ್ತಿದ್ದ ನಗರದ ಪ್ರಮುಖ ಶಾಪಿಂಗ್ ಮಾಲ್‍ಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಶನಿವಾರ ತುಸು ಏರಿಕೆ ಕಂಡಿತು.

ಮಧ್ಯಾಹ್ನದವರೆಗೆ ಖಾಲಿ ಹೊಡೆಯುತ್ತಿದ್ದ ಮಾಲ್‍ಗಳಲ್ಲಿ ಸಂಜೆ ಬಳಿಕ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು. ನಗರದ ಬೆರಳೆಣಿಕೆಯಷ್ಟು ಮಾಲ್‍ಗಳಲ್ಲಿ ಮಾತ್ರ ಗ್ರಾಹಕರು ಕಂಡು ಬಂದರು. ಇನ್ನು ಕೆಲವೆಡೆ ಮಾಲ್‌ಗಳೂ ವಾರಂತ್ಯದಲ್ಲೂ ಭಣಗುಡುತ್ತಿದ್ದವು.

ಫೋರಂ ಮಾಲ್, ಗರುಡಾ ಮಾಲ್, ಒರಾಯನ್ ಮಾಲ್, ಸೆಂಟ್ರಲ್ ಮಾಲ್, ಮಂತ್ರಿ ಮಾಲ್ ಸೇರಿ ನಗರದ ಪ್ರಮುಖ ಮಾಲ್‍ಗಳಿಗೆ ವಾರಾಂತ್ಯದಲ್ಲಿ ಮೋಜು ಮಾಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದರೆ, ಲಾಕ್‍ಡೌನಿಂದಾಗಿ ಎರಡೂವರೆ ತಿಂಗಳಿ
ನಿಂದ ಮಾಲ್‌ಗಳನ್ನು ಮುಚ್ಚಲಾಗಿತ್ತು. ಮಾಲ್‍ಗಳು ಪುನರಾರಂಭಗೊಂಡು ವಾರ ಕಳೆದರೂ ಕೊರೊನಾ ಭೀತಿಯಿಂದ ಜನ ಅವುಗಳತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

‘ನಾಲ್ಕೈದು ದಿನಗಳಿಗೆ ಹೋಲಿಸಿದರೆ ಮಾಲ್‍ಗೆ ಬಂದವರ ಸಂಖ್ಯೆ ಶನಿವಾರ ಏರಿಕೆ ಕಂಡಿದೆ. ಗ್ರಾಹಕರು ಹೆಚ್ಚಾದ ಕಾರಣ ಮಾಲ್‍ನಲ್ಲಿ ಗಂಟೆಗೊಮ್ಮೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಸೌಂದರ್ಯವರ್ಧಕಗಳು ಹಾಗೂ ಬಟ್ಟೆ ಖರೀದಿ ಮಳಿಗೆಗಳ ಬಳಿ ಗ್ರಾಹಕರ ಸಂಖ್ಯೆ ಹೆಚ್ಚು ಇತ್ತು. ಗ್ರಾಹಕರ ಸಂಖ್ಯೆ ಭಾನುವಾರ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಕೋರಮಂಗಲದ ಫೋರಂ ಮಾಲ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಲ್‍ಗೆ ಬರುವವರ ಸಂಖ್ಯೆ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ. ಈ ವಾರದ ಆರಂಭದ ದಿನಗಳಿಗೆ ಹೋಲಿಸಿದರೆ ಗ್ರಾಹಕರ ಸಂಖ್ಯೆ ಚೇತರಿಕೆ ಕಂಡಿದೆ. ಸಂಜೆಯಿಂದ ಗ್ರಾಹಕರ ಸಂಖ್ಯೆ ಏರತೊಡಗಿತು’ ಎಂದು ಗರುಡಾ ಮಾಲ್ ವ್ಯವಸ್ಥಾಪಕ ನಿರ್ದೇಶಕ ನಂದೇಶ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.