ADVERTISEMENT

ಬೆಂಗಳೂರು: ಬಾಳೆತೋಟದಲ್ಲಿ ಪಶ್ಚಿಮ ಬಂಗಾಳ ಮೂಲದ ಮಹಿಳೆ ಸೋನಾಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 18:42 IST
Last Updated 26 ಫೆಬ್ರುವರಿ 2026, 18:42 IST
ಸೋನಾಲಿ
ಸೋನಾಲಿ   

ಬೆಂಗಳೂರು: ವೇಲ್‌ನಿಂದ ಕುತ್ತಿಗೆ ಬಿಗಿದು, ಪಶ್ಚಿಮ ಬಂಗಾಳದ ಸೋನಾಲಿ ಕಥುವಾ (30) ಅವರನ್ನು ಸಿದ್ದಾಪುರದಲ್ಲಿ ಕೊಲೆ ಮಾಡಲಾಗಿದೆ.

ಸಿದ್ದಾಪುರದ ಬಾಳೆ ತೋಟದಲ್ಲಿ ಸೋನಾಲಿ ಅವರ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ವರ್ತೂರು ಠಾಣೆ ಪೊಲೀಸರು ಮಾಹಿತಿ ನೀಡಿದರು.‌

ವರ್ಷದ ಹಿಂದೆ ಸೋನಾಲಿ ಕಥುವಾ, ಪತಿ ಬಾಬು ಶೇಕ್‌ ಮತ್ತು ಕುಟುಂಬ ಸದಸ್ಯರ ಜತೆ ನಗರಕ್ಕೆ ಬಂದಿದ್ದು, ಸಿದ್ದಾಪುರದ ರಾಯಲ್‌ ಇಂಗ್ಲಿಷ್ ಶಾಲೆ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಾಬು ಶೇಕ್‌, ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದು, ಬ್ರೋಕ್‌ಫೀಲ್ಡ್‌ ವಾಲ್‌ಸನ್ಸ್‌ ಫೆಸಿಲಿಟಿ ಸಲ್ಯೂಷನ್‌ನಲ್ಲಿ ಸೋನಾಲಿ ಹೌಸ್‌ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು.

ADVERTISEMENT

ಈ ಮಧ್ಯೆ ಬುಧವಾರ ರಾತ್ರಿ 7.30ರ ಸುಮಾರಿಗೆ ಮನೆಗೆ ಬಂದಿದ್ದ ಸೋನಾಲಿ, ‘ಕೆಲಸದ ಸ್ಥಳದಲ್ಲಿ ಮೊಬೈಲ್‌ ಬಿಟ್ಟು ಬಂದಿದ್ದೇನೆ’ ಎಂದು, ಪತಿಯ ಮೊಬೈಲ್‌ ತೆಗೆದುಕೊಂಡು ವಾಪಸ್‌ ಕೆಲಸದ ಸ್ಥಳಕ್ಕೆ ಹೋಗಿದ್ದಾರೆ. ಬಳಿಕ ಮನೆಗೆ ಬಂದಿಲ್ಲ. ಕೆಲ ಹೊತ್ತಿನ ಬಳಿಕ ಆಕೆ ಮತ್ತು ಪತಿಯ ಮೊಬೈಲ್‌ಗೆ ಕರೆ ಮಾಡಿದಾಗ ಎರಡೂ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿರುವುದು ಗೊತ್ತಾಗಿದೆ. ಬಳಿಕ ಗಾಬರಿಗೊಂಡ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಮಧ್ಯೆ ಬಾಳೆ ತೋಟದಲ್ಲಿ ಸೋನಾಲಿ ಕಥುವಾ ಮೃತದೇಹ ಕಂಡ ಸ್ಥಳೀಯರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕುತ್ತಿಗೆಗೆ ವೇಲ್‌ನಿಂದ ಬಿಗಿದು ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.