ADVERTISEMENT

ಪ್ರವಾಸಿ ತಾಣ: ವಾಹನಗಳಿಗೆ ಪಾಸ್‌

ಒತ್ತಡ ತಗ್ಗಿಸಲು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 15:32 IST
Last Updated 10 ನವೆಂಬರ್ 2025, 15:32 IST
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನದಲ್ಲಿ ಸುರೇಶ್ ಹೆಬ್ಳೀಕರ್, ಮೊಹಮ್ಮದ್ ತಬ್ರೇಜ್ ಆಲಂ ಷರೀಫ್, ಅವನಿ ಕುಮಾರ್ ವರ್ಮಾ ಮತ್ತು ಭಾಗ್ಯ ಅಜಯ್ ಕುಮಾರ್ ಕಲಾಕೃತಿ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನದಲ್ಲಿ ಸುರೇಶ್ ಹೆಬ್ಳೀಕರ್, ಮೊಹಮ್ಮದ್ ತಬ್ರೇಜ್ ಆಲಂ ಷರೀಫ್, ಅವನಿ ಕುಮಾರ್ ವರ್ಮಾ ಮತ್ತು ಭಾಗ್ಯ ಅಜಯ್ ಕುಮಾರ್ ಕಲಾಕೃತಿ ವೀಕ್ಷಿಸಿದರು ಪ್ರಜಾವಾಣಿ ಚಿತ್ರ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ‘ಪ್ರವಾಸಿ ತಾಣಗಳಲ್ಲಿ ಹಸಿರು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಪ್ರತಿದಿನ ನಿಗದಿತ ವಾಹನಗಳ ಸಂಚಾರಕ್ಕೆ ಪಾಸ್‌ ನೀಡುವ ನಿಯಮ ರೂಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್‌ ತಬ್ರೇಜ್‌ ಆಲಂ ಷರೀಫ್‌ ತಿಳಿಸಿದರು.

ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ, ಇಕೋ ವಾಚ್‌ ಸಂಸ್ಥೆ ಸಹಯೋಗದಲ್ಲಿ ನಡೆದ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಪರಿಸರ ಅದರ ಧಾರಣಾ ಸಾಮರ್ಥ್ಯದ ಮೇಲೆಯೇ ನಿಂತಿರುತ್ತದೆ. ಅದಕ್ಕಿಂತ ಹೆಚ್ಚಾದರೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಪರಿಸರ ತಾಣಗಳಲ್ಲಿ ಹೆಚ್ಚಿನ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ಕ್ರಮ ವಹಿಸಲಾಗುವುದು. ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರಿಸರ ಪ್ರವಾಸೋದ್ಯಮ ಹೆಸರಿನಲ್ಲಿ ಹೋಂ ಸ್ಟೇಗಳು, ರೆಸಾರ್ಟ್‌ಗಳು ಹೆಚ್ಚಾಗಿವೆ. ಮಿತಿಗಿಂತ ಹೆಚ್ಚಿನ ಪ್ರವಾಸದಿಂದ, ಪರಿಸರ ತಾಣಗಳು ಕೊಳಚೆ ಪ್ರದೇಶಗಳಾಗಿ ಮಾರ್ಪಡುವ ಆತಂಕವೂ ಎದುರಾಗಿದೆ. ಕಾರ್ಯಪಡೆ ಇದನ್ನು ನಿಯಂತ್ರಿಸಲು ಪ್ರಯತ್ನಿಸಲಿದೆ’ ಎಂದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿಕುಮಾರ್‌ ವರ್ಮಾ ಮಾತನಾಡಿ, ‘ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮತೆಯ ಅರಿವಿದ್ದರೂ, ಹೆಚ್ಚಿನ ರೆಸಾರ್ಟ್‌ಗಳ ಆರಂಭಕ್ಕೆ ಈ ಭಾಗದಲ್ಲಿ ಅನುಮತಿ ನೀಡಲಾಗುತ್ತಿದೆ. ಶರಾವತಿ ವಿದ್ಯುತ್‌ ಯೋಜನೆಗೆ ಸ್ಥಳೀಯರ ವಿರೋಧವಿದ್ದರೂ ಅವಕಾಶ ಕೊಡಲಾಗಿದೆ. ಧಾರಣಾ ಸಾಮರ್ಥ್ಯವನ್ನು ಮೀರಿ ಯೋಜನೆಗಳಿಗೆ ಅನುಮತಿ ನೀಡಬಾರದು’ ಎಂದು ಹೇಳಿದರು.

ಇಕೋ ವಾಚ್‌ ಸಂಸ್ಥೆ ನಿರ್ದೇಶಕ ಸುರೇಶ್‌ ಹೆಬ್ಳೀಕರ್‌, ‘ಜಾಗತಿಕ ತಾಪಮಾನದ ಪರಿಣಾಮಗಳನ್ನು ಕಣ್ಣಮುಂದೆ ಕಾಣುತ್ತಿದ್ದರೂ ನಾವಿನ್ನೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ. ಯೋಜನೆಗಳ ಹೆಸರಲ್ಲಿ ಇನ್ನೂ ಸಹಾಯಧನ ನೀಡುವ ಕಾಲದಲ್ಲಿ ನಾವಿದ್ದೇವೆ. ಪಶ್ಚಿಮ ಘಟ್ಟದ ರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ’ ಎಂದು ತಿಳಿಸಿದರು.

ಸಮ್ಮೇಳನದ ಭಾಗವಾಗಿ ಆಯೋಜಿಸಿದ್ದ ಪಶ್ಚಿಮ ಘಟ್ಟಗಳ ಕುರಿತ ಚಿತ್ರಕಲಾ ಪ್ರದರ್ಶನವೂ ಗಮನ ಸೆಳೆಯಿತು.

ಮಂಗಳೂರಿನಲ್ಲಿ ‘ಘಟ್ಟ ಸಂವಾದ’

‘ಪಶ್ಚಿಮಘಟ್ಟದ ಬಗ್ಗೆ ‘ಘಟ್ಟ ಸಂವಾದ’ವನ್ನು ಮಂಗಳೂರಿನಲ್ಲಿ ಮುಂದಿನ ಫೆಬ್ರುವರಿಯಲ್ಲಿ ನಡೆಸಲಾಗುವುದು. ತಜ್ಞರು ಅಧಿಕಾರಿಗಳು ವಿಜ್ಞಾನಿಗಳು ಪರಿಸರವಾದಿಗಳ ಜತೆ ನೀತಿ ನಿರೂಪಣೆ ಕುರಿತು ನಿರ್ಣಯ ಕೈಗೊಳ್ಳಲಾಗುವುದು’ ಎಂದು ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್‌ ತಬ್ರೇಜ್‌ ಆಲಂ ಷರೀಫ್‌ ತಿಳಿಸಿದರು. ‘ಪಶ್ಚಿಮ ಘಟ್ಟದ ವ್ಯಾಪ್ತಿಯ ಅತಿಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಪರಿಸರ ಸೂಕ್ಷ್ಮ ವಲಯ (ಎಕೊ ಸೆನ್ಸಿಟಿವ್‌ ಝೋನ್‌) ಇಲ್ಲವೇ ಪಾರಂಪರಿಕ ತಾಣ ಎಂದು ಘೋಷಣೆಯಾಗಬೇಕು ಎಂದು ಕಾರ್ಯಪಡೆ ಯೋಚಿಸಿದೆ. ಇದಕ್ಕೆ ಬೇಕಾದ ಚರ್ಚೆಗೆ ಅವಕಾಶ ನೀಡಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು. ‘ಪಶ್ಚಿಮ ಘಟ್ಟ ನಮ್ಮ ಹೆಮ್ಮೆ ಮಾತ್ರವಲ್ಲ ಬದುಕೂ ಹೌದು. ಇದರ ಮಹತ್ವ ತಿಳಿಸಲು ಪ್ರತ್ಯೇಕ ಪಶ್ಚಿಮ ಘಟ್ಟ ಗೀತೆಯನ್ನು ರೂಪಿಸಲಾಗುತ್ತಿದೆ. ‘ಮಿಲೇ ಸುರ್‌ ಮೇರಾ ತುಮ್ಹಾರ’ ಮಾದರಿಯಲ್ಲಿಯೇ ಇದು ಇರಲಿದೆ. ಅಲ್ಲದೇ ಪಶ್ಚಿಮ ಘಟ್ಟ ಜಾಗೃತಿಯ ಪೋಸ್ಟ್‌ ಕಾರ್ಡ್‌ ಕಾರ್ಯಕ್ರಮವೂ ಡಿಸೆಂಬರ್‌ನಲ್ಲಿ ಆಗಲಿದೆ. ಪಶ್ಚಿಮ ಘಟ್ಟದ ಮಾಹಿತಿ ತಿಳಿಸಲು 10 ಎಕರೆಯಲ್ಲಿ ಮ್ಯೂಸಿಯಂ ರೂಪಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.