ಜಿ. ಪರಮೇಶ್ವರ
ಬೆಂಗಳೂರು: ನಗರದಲ್ಲಿ ತಡರಾತ್ರಿ ಹಾಗೂ ನಸುಕಿನ ಸಂದರ್ಭದಲ್ಲಿ ವ್ಹೀಲಿ ಹಾವಳಿ ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ‘ವಿಶೇಷ ತಂಡ’ ರಚಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಕೆ. ಗೋವಿಂದರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬೆಂಗಳೂರಿನಲ್ಲಿ ವ್ಹೀಲಿ ನಡೆಯುವ 35 ರಸ್ತೆಗಳನ್ನು ಗುರುತಿಸಲಾಗಿದೆ. ರಾತ್ರಿ 12ರ ನಂತರ ಹಾಗೂ ನಸುಕಿನ ನಾಲ್ಕು– ಐದರ ಸಮಯದಲ್ಲಿ ವ್ಹೀಲಿ ಹಾವಳಿ ಇದೆ. ಸಾಮಾನ್ಯ ಪೊಲೀಸರ ಪಾಳಿ ಮುಗಿದ ನಂತರ ವ್ಹೀಲಿ ಮಾಡುತ್ತಿದ್ದಾರೆ. ಹೀಗಾಗಿ, ವಿಶೇಷ ತಂಡ ರಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
‘ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಹಲವು ನಗರಗಳಲ್ಲಿ ವ್ಹೀಲಿ ಒಂದು ಪಿಡುಗಾಗಿದೆ. ವ್ಹೀಲಿ ಪ್ರಕರಣಗಳಲ್ಲಿ ಭಾಗಿಯಾಗುವ ಬೈಕ್ ಸವಾರರ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸವಾರರನ್ನು ವಶಕ್ಕೆ ಪಡೆದುಕೊಂಡು, ವಾಹನಗಳ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ವ್ಹೀಲಿ ಮಾಡುವ ಬಾಲಕರ ವಿರುದ್ಧ ಮಕ್ಕಳ ರಕ್ಷಣೆ ಮತ್ತು ಆರೈಕೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅಂತಹ ಸವಾರರ ಪೋಷಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.
‘ವ್ಹೀಲಿ ಮಾಡಲು ಬಳಸಿದ ವಾಹನಗಳ ಆರ್.ಸಿ. ಪುಸ್ತಕ ಹಾಗೂ ಬೈಕ್ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ಅಮಾನತುಗೊಳಿಸಲಾಗಿದೆ. 2024ರಲ್ಲಿ 47 ಡಿಎಲ್, 195 ಆರ್‌ಸಿ, 20025ರಲ್ಲಿ ಈವರೆಗೆ 41 ಡಿಎಲ್ ಮತ್ತು 142 ಆರ್‌ಸಿ ಅಮಾನತು ಮಾಡಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
ಸವಾಲು: ‘ರಾಜ್ಯದಲ್ಲಿ ಇಂಟರ್‌ನೆಟ್, ಮೊಬೈಲ್ ಫೋನ್, ಆನ್‌ಲೈನ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಗಟ್ಟುವುದು ದೊಡ್ಡ ಸವಾಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಕಾಂಗ್ರೆಸ್‌ನ ಎಸ್. ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2023ರಲ್ಲಿ 22,253 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 6,007 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಒಟ್ಟು ₹1,287 ಕೋಟಿ ವಂಚನೆಯಾಗಿದೆ. 2024ರಲ್ಲಿ 22,472 ಪ್ರಕರಣಗಳಲ್ಲಿ 2,858 ಪತ್ತೆ ಹಚ್ಚಲಾಗಿದ್ದು ₹2,515 ಕೋಟಿ ವಂಚನೆಯಾಗಿದೆ. 2025ರಲ್ಲಿ ಜುಲೈವರೆಗೆ 8,620 ಪ್ರಕರಣಗಳಲ್ಲಿ 399 ಪತ್ತೆ ಹಚ್ಚಲಾಗಿದ್ದು, ₹861 ಕೋಟಿ ವಂಚನೆಯಾಗಿದೆ ಎಂದು ಅಂಕಿ–ಅಂಶ ನೀಡಿದರು.
‘ಸೈಬರ್ ಅಪರಾಧ ಪತ್ತೆಹಚ್ಚುವುದು ಸುಲಭದ ಕೆಲಸವಲ್ಲ. ತಂತ್ರಜ್ಞಾನ ಸೇರಿದಂತೆ ತಜ್ಞರ ಅಗತ್ಯವಿದೆ. ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
ನಿರ್ದಾಕ್ಷಿಣ್ಯ ಕ್ರಮ: ‘ಮಾದಕ ವಸ್ತುಗಳನ್ನು ನಿಯಂತ್ರಿಸಿ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿಯರೂ ಈ ಜಾಲದಲ್ಲಿದ್ದಾರೆ ಎಂದರು.
‘ಡ್ರಗ್ಸ್ ದಂಧೆಯನ್ನು ಸಂಪೂರ್ಣ ಮಟ್ಟ ಹಾಕಲು ಮತ್ತು ಪೆಡ್ಲರ್‌ಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಜರುಗಿಸಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.