ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿಗಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆಯ ಜಂಕ್ಷನ್ ವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಪರದಾಡುತ್ತಿದ್ದಾರೆ.
ನಗರದ ಕೇಂದ್ರ ವಲಯದ ರೆಸಿಡೆನ್ಸಿ ರಸ್ತೆಯು ಪ್ರಮುಖ ಮಾರ್ಗವಾಗಿದ್ದು, ಮೇ 31ರ ವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಶನಿವಾರ ರಾತ್ರಿ ಎರಡು ತಾಸಿಗೂ ಹೆಚ್ಚು ಕಾಲ ವಾಹನಗಳು ರೆಸಿಡೆನ್ಸಿ ರಸ್ತೆಯ ಮೇಲ್ಸೇತುವೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಆಂಬುಲೆನ್ಸ್‌ಗಳೂ ದಟ್ಟಣೆಯಲ್ಲಿ ಸಿಲುಕಿದ್ದವು. ಭಾನುವಾರ ಸಹ ಇದೇ ಪರಿಸ್ಥಿತಿ ಇತ್ತು.
ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಆ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ದಟ್ಟಣೆ ಉಂಟಾಗಿದೆ.
ಸಂಚಾರ ಸಲಹೆ: ರಿಚ್ಮಂಡ್ ಜಂಕ್ಷನ್, ರಿಚ್ಮಂಡ್ ಮೇಲ್ಸೇತುವೆ, ಸೇಂಟ್ ಮಾರ್ಕ್ಸ್ ರಸ್ತೆ ಕಡೆಯಿಂದ ರೆಸಿಡೆನ್ಸಿ ರಸ್ತೆಯಲ್ಲಿ ಬಂದು ಎಚ್‌ಎಎಲ್, ಮಾರತ್ತಹಳ್ಳಿ ಕಡೆಗೆ ಸಂಚರಿಸುವ ವಾಹನ ಸವಾರರು, ಆಶೀರ್ವಾದಂ ಜಂಕ್ಷನ್ ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಮೂಲಕ ಮುಂದಕ್ಕೆ ಸಾಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.