ADVERTISEMENT

ಪಿಡಬ್ಲ್ಯುಡಿ ರಸ್ತೆಯಲ್ಲಿ ವೈಟ್‌ಟಾಪಿಂಗ್‌!

ಹೊಸಕೋಟೆ–ಕಾಡುಗೋಡಿ–ಆನೇಕಲ್‌ ರಸ್ತೆಯಲ್ಲಿ 3ಕಿ.ಮೀ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:41 IST
Last Updated 18 ಜೂನ್ 2019, 19:41 IST

ಬೆಂಗಳೂರು:ವೈಟ್‌ಟಾಪಿಂಗ್‌ ರಸ್ತೆಗಳ ನಿರ್ಮಾಣಕ್ಕೆ ಸಾರ್ವಜನಿಕರ ವಿರೋಧ ಹೆಚ್ಚುತ್ತಿದ್ದರೆ, ಬಿಬಿಎಂಪಿ ತನ್ನ ವ್ಯಾಪ್ತಿ ಮೀರಿದ ರಸ್ತೆಗಳನ್ನೂ ಕಾಂಕ್ರೀಟ್‌ ಮಯಗೊಳಿಸಲು ಮುಂದಾಗಿದೆ. ಸರ್ಕಾರದಿಂದ ಬರುವ ಅನುದಾನ ಕೈತಪ್ಪುವ ಆತಂಕವೇ ಅದು ತನ್ನ ‘ಗಡಿ ಮೀರಲು’ ಮುಂದಾಗಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.‌

ಹೊಸಕೋಟೆ–ಕಾಡುಗೋಡಿ–ಆನೇಕಲ್‌ ರಸ್ತೆಯಲ್ಲಿ ಮೂರು ಕಿ.ಮೀ. ದೂರದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ವ್ಯಾಪ್ತಿಗೆ ಬರುತ್ತದೆ. ದಿಣ್ಣೂರು–ಐಟಿಪಿಎಲ್‌–ಬೆಳ್ತೂರು ರಸ್ತೆ ನಿರ್ಮಾಣಕ್ಕೆಂದು ಇರಿಸಿದ್ದ ಅನುದಾನವನ್ನು ಈ ರಸ್ತೆಗೆ ಬಳಸಲು ಯೋಜಿಸಲಾಗಿದೆ.

ವೈಟ್‌ ಟಾಪಿಂಗ್‌ ಪ್ಯಾಕೇಜ್‌–2 ಅಡಿ, ದಿಣ್ಣೂರು–ಐಟಿಪಿಎಲ್‌ ಮತ್ತು ಬೆಳ್ತೂರು (2.8 ಕಿ.ಮೀ) ರಸ್ತೆಗೆ ಕಾಂಕ್ರೀಟ್‌ ಹಾಕುವ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು. ಆದರೆ, ಈ ಮಾರ್ಗದಲ್ಲಿ ಮೆಟ್ರೊ ಮತ್ತು ಇನ್ನಿತರ ಕಾಮಗಾರಿ ನಡೆಯುತ್ತಿರುವುದರಿಂದ, ಇದೇ ಮೊತ್ತವನ್ನು ಹೊಸಕೋಟೆ–ಕಾಡುಗೋಡಿ–ಆನೇಕಲ್‌ (3 ಕಿ.ಮೀ) ರಸ್ತೆ ನಿರ್ಮಾಣಕ್ಕೆ ಬಳಸಲು ಅನುಮತಿ ನೀಡಬೇಕು ಎಂದು ಬಿಬಿಎಂಪಿಯು ಸರ್ಕಾರಕ್ಕೆ ಪತ್ರ ಬರೆದಿದೆ.

ADVERTISEMENT

ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಕೂಡ ಬಿಬಿಎಂಪಿಗೆ ಈ ಕುರಿತು ಪತ್ರ ಬರೆದಿದ್ದು, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೊಸಕೋಟೆ–ಕಾಡುಗೋಡಿ–ಆನೇಕಲ್‌ ರಸ್ತೆಯನ್ನು ಕಾಂಕ್ರೀಟ್‌ ಹಾಕುವುದರಿಂದ ಐಟಿ ಕಂಪನಿಗಳಿಗೆ ಓಡಾಡುವ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ವ್ಯಾಪ್ತಿ ಮೀರಿ ಬಿಬಿಎಂಪಿ ಈ ರಸ್ತೆ ನಿರ್ಮಿಸಲು ಮುಂದಾಗಿರುವುದಕ್ಕೆ ನಗರಾಭಿವೃದ್ಧಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

‘ನಗರದೊಳಗೆ ರಸ್ತೆ ನಿರ್ಮಾಣ ಮಾಡುವುದಕ್ಕೇ ಸಮಯವಿಲ್ಲ. ನಮ್ಮ ವ್ಯಾಪ್ತಿ ಮೀರಿ ಈ ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವ ಅಗತ್ಯವಿದೆಯೇ?’ ಬಿಬಿಎಂಪಿಯ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಇಂಥದ್ದೊಂದು ಪ್ರಸ್ತಾವ ಇದ್ದದ್ದು ನಿಜ. ಆದರೆ, ಇದಕ್ಕೆ ಅನುಮೋದನೆ ಸಿಕ್ಕಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಈ ರಸ್ತೆ ನಿರ್ಮಾಣಕ್ಕೆ ₹25 ಕೋಟಿ ವೆಚ್ಚವಾಗಬಹುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕೆ.ಟಿ. ನಾಗರಾಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.