ADVERTISEMENT

ರಸ್ತೆ ಗುಣಮಟ್ಟ ಕಳಪೆ: ವೈಟ್‌ ಟಾಪಿಂಗ್ ರದ್ದು –ಬೊಮ್ಮಾಯಿ ಸುಳಿವು

ವಿಧಾನಪರಿಷತ್‌ನಲ್ಲಿ ಎಸ್. ರವಿ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 20:29 IST
Last Updated 24 ಮಾರ್ಚ್ 2022, 20:29 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಭಾರಿ ವೆಚ್ಚ ತಗಲುವುದರಿಂದ ನಗರದ ರಸ್ತೆಗಳ ವೈಟ್ ಟಾಪಿಂಗ್ ಬಗ್ಗೆ ಮರು ಚಿಂತನೆ ನಡೆಸಲಾಗುತ್ತಿದೆ.ಅಲ್ಲದೆ, ರಸ್ತೆಗಳ ಸಮಗ್ರ ನಿರ್ವಹಣೆಗೆ ವಿಶೇಷ ಕೋಡ್‌ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಳಪೆ ಗುಣಮಟ್ಟದ ರಸ್ತೆಯ ಬಗ್ಗೆ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಸ್. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಬೆಂಗಳೂರಿನಲ್ಲಿ 12 ಅತಿ ದಟ್ಟಣೆಯ ರಸ್ತೆಗಳ ಕಾಮಗಾರಿಯ ಟೆಂಡರ್‌ ರದ್ದುಪಡಿಸಲಾಗಿದೆ. ಪರಿಷ್ಕೃತ ದರದಲ್ಲಿ ಶೀಘ್ರದಲ್ಲಿ ಮರು ಟೆಂಡರ್‌ ಆಹ್ವಾನಿಸಲಾಗುವುದು’ ಎಂದರು.

‘ಅತಿ ದಟ್ಟಣೆಯ ರಸ್ತೆಗಳಿಗೆ ₹ 800 ಕೋಟಿ ವೆಚ್ಚ ನಿಗದಿ ಮಾಡಲಾಗಿತ್ತು. ಈ ಯೋಜನೆಯಲ್ಲಿ ರಸ್ತೆ ಮಾಡಲು ₹ 300 ಕೋಟಿ, ಐದು ವರ್ಷದ ರಸ್ತೆ ನಿರ್ವಹಣೆಗೆ ₹ 500 ಕೋಟಿ ವೆಚ್ಚ ನಿಗದಿಪಡಿಸಲಾಗಿತ್ತು. ಬಿಬಿಎಂಪಿ ಕಾಯ್ದೆ ಪ್ರಕಾರ ರಸ್ತೆ ನಿರ್ಮಿಸಿದವರೇ ಎರಡು ವರ್ಷ ರಸ್ತೆ ನಿರ್ವಹಣೆಯನ್ನೂ ಮಾಡಬೇಕಿದೆ. ಆ ವೆಚ್ಚವನ್ನು ಟೆಂಡರ್‌ನಲ್ಲಿ ಸೇರಿಸಲಾಗಿತ್ತು. ಹೀಗಾಗಿ, ಈ ಟೆಂಡರ್ ರದ್ದುಪಡಿಸಲಾಗಿದೆ’ ಎಂದರು.

ADVERTISEMENT

‘ಒಂದು ಕಿ.ಮೀ ಉದ್ದದ ರಸ್ತೆ ಡಾಂಬರೀಕರಣಕ್ಕೆ ₹ 75 ಲಕ್ಷದಿಂದ ₹ 1 ಕೋಟಿ ವೆಚ್ಚ ತಗಲಲಿದೆ. ಪ್ರತಿ ಕಿ.ಮೀ ವೈಟ್‌ ಟಾಪಿಂಗ್‌ಗೆ ಸುಮಾರು ₹ 9 ಕೋಟಿಯಿಂದ ₹ 10 ಕೋಟಿ ವೆಚ್ಚ ತಗಲುತ್ತಿದೆ. ವೈಟ್‌ ಟಾಪಿಂಗ್‌ ರಸ್ತೆಗಳ ನಿರ್ವಹಣೆ ವೆಚ್ಚ ಕಡಿಮೆ ಇದ್ದರೂ, ಸಾಮಾನ್ಯ ಡಾಂಬರೀಕರಣ ಮಾಡಿದರೆ ಕಡಿಮೆ ವೆಚ್ಚವಾಗಲಿದೆ. ವೈಟ್ ಟಾಪಿಂಗ್ ಮಾಡಿದರೆ ವೆಚ್ಚ 10 ಪಟ್ಟು ಹೆಚ್ಚಾಗುತ್ತಿದೆ’ ಎಂದರು.

‘ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ 11 ಜನ ಮೃತಪಟ್ಟಿದ್ದಾರೆ. ರಸ್ತೆ ಗುಂಡಿಯಲ್ಲಿ ಗಾಯಗೊಂಡವರಿಗೆ ಯಾವ ರೀತಿ ಪರಿಹಾರ ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ಅಗತ್ಯವಾದ ಪೈಥಾನ್ ಯಂತ್ರ ಖರೀದಿಸಲು ಸರ್ಕಾರಕ್ಕೆ ಏನು ತೊಂದರೆ’ ಎಂದು ರವಿ ಖಾರವಾಗಿ ಪ್ರಶ್ನಿಸಿದರು.

‘ಖಾಸಗಿಯವರಿಂದ ಪೈಥಾನ್ ಯಂತ್ರ ಬಾಡಿಗೆ ಪಡೆದು 182 ಕಿಲೋ ಮೀಟರ್ ರಸ್ತೆಯಲ್ಲಿ ಗುಂಡಿ ಮುಚ್ಚಿಸಲಾಗುತ್ತಿದೆ. 442 ಕಿಲೋ ಮೀಟರ್ ರಸ್ತೆಯಲ್ಲೂ ಗುಂಡಿ ಮುಚ್ಚಲು ಸೂಚಿಸಲಾಗಿದೆ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

‘ಬಿಬಿಎಂಪಿಯ ಕೆಲಸಗಳನ್ನು ಕೆಆರ್‌ಐಡಿಎಲ್‌ಗೆ ಯಾರ ಕಾಲದಲ್ಲಿ ಗುತ್ತಿಗೆ ನೀಡಲಾಗಿತ್ತು. ಅಧಿಕಾರಿಗಳು ಸರ್ಕಾರದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದರು ಎಂಬುದೆಲ್ಲವನ್ನೂ ಲೋಕಾಯುಕ್ತ ವರದಿ ಆಧರಿಸಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆಗೆ ಅಂಗೀಕಾರ
ಬೆಂಗಳೂರು: ಶಿಕ್ಷೆಗೊಳಗಾದ ಮತ್ತು ಶಿಸ್ತು ಕ್ರಮಕ್ಕೆ ಒಳಗಾದ ಸರ್ಕಾರಿ ನೌಕರರು, ಸಹಕಾರಿ ಸಂಸ್ಥೆಗಳ ನೌಕರರುಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಪ್ರಸ್ತಾವವುಳ್ಳ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆ– 2022ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಜನಸಂಖ್ಯೆಯ ಮಿತಿ ನಿಗದಿಪಡಿಸುವ, ಜಿಲ್ಲಾ ಯೋಜನಾ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವುದಕ್ಕೆ ಸಂಬಂಧಿಸಿದ ಅಂಶಗಳೂ ಮಸೂದೆಯಲ್ಲಿವೆ.

‘ಕೆಆರ್‌ಐಡಿಎಲ್ ನೀಡಿದ್ದ ಕಾಮಗಾರಿ ರದ್ದು’
ಬೆಂಗಳೂರು
: ‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ಕಾಮಗಾರಿ ನೀಡುವುದನ್ನು ನಾವು ಅಧಿಕಾರಕ್ಕೆ ಬಂದ ಬಳಿಕ ನಿಲ್ಲಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಕೆ. ಗೋವಿಂದರಾಜು ಅವರು ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡುತ್ತಿರುವುದರಿಂದ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.

ಅದಕ್ಕೆ ಮುಖ್ಯಮಂತ್ರಿ, ‘ವಿರೋಧ ಪಕ್ಷದಲ್ಲಿದ್ದಾಗ ಆ ಸಂಸ್ಥೆಗೆ ಕೆಲಸ ನೀಡಬಾರದು ಎನ್ನುವುದು, ಅಧಿಕಾರಕ್ಕೆ ಬಂದ ಬಳಿಕ ಅದೇ ಸಂಸ್ಥೆಗೆ ಕೆಲಸ ನೀಡಿ ತಮಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುವುದನ್ನು ಸರಿಯಲ್ಲ. ಪ್ರಗತಿ ಪರಿಶೀಲನೆ ನಡೆಸಿದಾಗ ಈ ಸಂಸ್ಥೆಯ ಕೆಲಸದ ಗುಣಮಟ್ಟ ಸರಿ ಇಲ್ಲ ಎನ್ನುವುದು ಮನವರಿಕೆಯಾಗಿದೆ. ಹೀಗಾಗಿ, ಕೆಲವು ಟೆಂಡರ್ ರದ್ದುಗೊಳಿಸಲಾಗಿದೆ’ ಎಂದರು.

‘ಪ್ರಗತಿಯಲ್ಲಿರುವ, ಬಾಕಿ ಇರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಹಾಗೂ ಗುಣಮಟ್ಟ ಸುಧಾರಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿಯಿಂದಲೇ ಕೆಲಸ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ಬೆಂಗಳೂರಿನಲ್ಲಿ 7011 ಕಿಲೋ ಮೀಟರ್ ರಸ್ತೆಯನ್ನು ₹ 6,767 ಕೋಟಿ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. 4,761 ಕೆಲಸಗಳು ಪ್ರಗತಿಯಲ್ಲಿವೆ. ಕಾವೇರಿ ನೀರು ಪೂರೈಸುವ ಕೊಳವೆ ಮಾರ್ಗದಲ್ಲಿ ರಸ್ತೆ ಕುಸಿದಿರುವುದನ್ನು ದುರಸ್ತಿ ಮಾಡಲು ಹೆಚ್ಚಿನ ಅನುದಾನ ನೀಡಲಾಗುವುದು’ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.