ADVERTISEMENT

ವೈಟ್‌ ಟಾಪಿಂಗ್: ಬಿಜೆಪಿ ಮುಖಂಡನಿಂದ ಸಿಎಂಗೆ ದೂರು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 16:57 IST
Last Updated 30 ನವೆಂಬರ್ 2021, 16:57 IST
ಎನ್.ಆರ್.ರಮೇಶ್
ಎನ್.ಆರ್.ರಮೇಶ್   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ₹35.50 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್ ರಸ್ತೆ ಅಭಿವೃದ್ಧಿಗೆ ಮರು ಟೆಂಡರ್ ಪ್ರಕ್ರಿಯೆ ನಡೆಸದೆ ಗುತ್ತಿಗೆ ವಹಿಸಲು ಮುಂದಾಗಿರುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಪತ್ರ ಬರೆದಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮೈಸೂರು ರಸ್ತೆಯಿಂದ ಜ್ಞಾನಭಾರತಿ ಆವರಣದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಟೆಂಡರ್ ಆಹ್ವಾನಿಸದೆ ನೇರವಾಗಿ ಗುತ್ತಿಗೆದಾರರಿಗೆ ವಹಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘21ರಿಂದ 24 ಮೀಟರ್ ಅಗಲದ ವೈಟ್‌ಟಾಪಿಂಗ್ ಕಾಮಗಾರಿಗೆ ಈಗಿನ ಕಚ್ಚಾ ವಸ್ತುಗಳ ಬೆಲೆಗಳ ಅನ್ವಯ ₹9ರಿಂದ ₹10 ಕೋಟಿ ಬೇಕಾಗಿದೆ. ಕೇವಲ 1.03 ಕಿಲೋ ಮೀಟರ್‌ಗೆ ₹35.50 ಕೋಟಿ ಮೊತ್ತ ವೆಚ್ಚ ಮಾಡುತ್ತಿರುವುದು ಸರಿಯಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘₹1 ಲಕ್ಷಕ್ಕೂ ಹೆಚ್ಚಿನ ಮೊತ್ತದ ಕಾಮಗಾರಿಯಾದರೆಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪ್ರಕಾರ ಟೆಂಡರ್ ಆಹ್ವಾನಿಸಲೇಬೇಕು. ಬೇರೆ ಕಾಮಗಾರಿಯ ಉಳಿಕೆ ಮೊತ್ತ ಆಗಿರುವುದರಿಂದ ಟೆಂಡರ್ ಆಹ್ವಾನಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದು ಕಾನೂನಿಗೆ ವಿರುದ್ಧ' ಎಂದು ಪ್ರತಿಪಾದಿಸಿದ್ದಾರೆ.

ಮುಖ್ಯ ಆಯುಕ್ತರ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿ ನಿಯಮಾನುಸಾರ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ವಹಿಸಬೇಕು ಎಂದು ಅವರು ಕೋರಿದ್ದಾರೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೂ ರಮೇಶ್ ಪತ್ರ ಬರೆದಿದ್ದಾರೆ.

‘2.43 ಕಿ.ಮೀ ರಸ್ತೆ: ಗೌರವ್‌ ಗುಪ್ತ’

ಜ್ಞಾನಭಾರತಿ ಆವರಣದಲ್ಲಿ 2.43 ಕಿಲೋ ಮೀಟರ್‌ ಉದ್ದದ ವೈಟ್‌ ಟಾಪಿಂಗ್ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ.

‘ಈ ಪೈಕಿ 1.1 ಕಿಲೋ ಮೀಟರ್‌ನಲ್ಲಿ ಎರಡು ಪಥದ ರಸ್ತೆಯನ್ನು ಆರು ಪಥವಾಗಿ ವಿಸ್ತರಿಸಲಾಗುವುದು. ವೈಟ್‌ ಟಾಪಿಂಗ್ ಕಾಮಗಾರಿ ಮತ್ತು ರಸ್ತೆ ವಿಸ್ತರಣೆಯೂ ಒಳಗೊಂಡಿದೆ’ ಎಂದು ವಿವರಿಸಿದ್ದಾರೆ.

‘ಈಗಾಗಲೇ ಗುತ್ತಿಗೆ ನೀಡಲಾಗಿರುವ ವೈಟ್‌ ಟಾಪಿಂಗ್ ಪ್ಯಾಕೇಜ್‌ನ ಉಳಿಕೆ ಮೊತ್ತದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಕಾಮಗಾರಿಯ ಸ್ವರೂಪ ಬದಲಾವಣೆ ಮಾಡಿಲ್ಲ, ಬದಲಾದ ಜಾಗದಲ್ಲೂ ಅದೇ ಸ್ವರೂಪದ ಕಾಮಗಾರಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಆದ್ದರಿಂದ ಕೆಟಿಪಿಪಿ ಕಾಯ್ದೆಯ ಉಲ್ಲಂಘನೆ ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಪ್ರಸ್ತಾವನೆ ಇನ್ನೂ ಸರ್ಕಾರದ ಮಂಜೂರಾತಿಗೆ ಕಾದಿದ್ದು, ಗುತ್ತಿಗೆದಾರರಿಗೆ ಯಾವುದೇ ಕಾರ್ಯಾದೇಶ ನೀಡಿಲ್ಲ. ಕಾಮಗಾರಿಯೂ ಆರಂಭವಾಗಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.