ADVERTISEMENT

ಟೆಕಿ ಮನೆ ಕಳವು: ಛಾಯಾಗ್ರಾಹಕ ಸೆರೆ, ₹55 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 0:15 IST
Last Updated 18 ಫೆಬ್ರುವರಿ 2026, 0:15 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬಾಡಿಗೆ ಮನೆ ವಿಚಾರಿಸಲು ಹೋದಾಗ ಮನೆಯ ಹೊರಗೆ ಶೂ ರ್‍ಯಾಕ್‌ನಲ್ಲಿಟ್ಟಿದ್ದ ಕೀ ಬಳಸಿಕೊಂಡು ಸಾಫ್ಟ್‌ವೇರ್‌ ಎಂಜಿನಿಯರ್ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಛಾಯಾಗ್ರಾಹಕನನ್ನು ವೈಟ್‌ಫೀಲ್ಡ್‌  ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ವೈಟ್‌ಫೀಲ್ಡ್ ನಿವಾಸಿ ಕಿರಣ್ ಎಂಬುವವರನ್ನು ಬಂಧಿಸಿ, ₹55 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಕಿರಣ್ ಅವರು ಫೋಟೊ ಸ್ಟುಡಿಯೊ ಇಟ್ಟುಕೊಂಡಿದ್ದರು. ಕೋವಿಡ್‌ ಸಂದರ್ಭದಲ್ಲಿ ಆರ್ಥಿಕ ನಷ್ಟ ಉಂಟಾದ ಪರಿಣಾಮ ಸ್ಟುಡಿಯೊ ಬಂದ್ ಮಾಡಿದ್ದರು. ಕ್ಯಾಮೆರಾ ಇದ್ದ ಕಾರಣ ವಿವಿಧ ಕಾರ್ಯಕ್ರಮಗಳಿಗೆ ಹೋಗುತ್ತಿದ್ದು, ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು.

ನಾಗೊಂಡನಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ಜಗದೀಶ್‌ ಅವರು ಮನೆಯ ಬೀಗ ಹಾಕಿ, ಶಾಲೆಯಿಂದ ಮಕ್ಕಳು ಬರುತ್ತಾರೆಂದು ಕೀ ಯನ್ನು ಶೂ ರ್‍ಯಾಕ್‌ನಲ್ಲಿಟ್ಟು ಹೋಗಿದ್ದರು. ಈ ನಡುವೆ ಬಾಡಿಗೆ ಮನೆ ಹುಡುಕುತ್ತಿದ್ದ ಆರೋಪಿ, ಜಗದೀಶ್​​ ಅವರ ಮನೆ ಎದುರು ‘ಮನೆ ಬಾಡಿಗೆಗೆ ಇದೆ’ ಎಂಬ ಫಲಕ ನೋಡಿದ್ದಾರೆ. ವಿಚಾರಿಸಲು ಮನೆ ಬಳಿ ಹೋದಾಗ ಶೂ ರ್‍ಯಾಕ್‌ನಲ್ಲಿ ಕೀ ಇಟ್ಟಿದ್ದನ್ನು ಗಮನಿಸಿ, ಆ ಕೀ ಯಿಂದ ಮನೆಯ ಬಾಗಿಲು ತೆರೆದು ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು.

ಮನೆ ಮಾಲೀಕ ಜಗದೀಶ್​ ಅವರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಚಿನ್ನಾಭರಣ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆತನ ಮನೆಯಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಿರಣ್​​ಗೆ ತಾನು ಮಾಡಿದ ಕೃತ್ಯದಿಂದ ಪಶ್ಚಾತ್ತಾಪವಾಗಿ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ವಾಪಸ್‌ ಬರುವಾಗ ಅವರನ್ನು ಬಂಧಿಸಿದ್ದು ವಿಚಾರಣೆ ಮುಂದುವರಿದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.