ADVERTISEMENT

ತಲೆ ಮೇಲೆ ಕಲ್ಲು ಹಾಕಿ ಪತ್ನಿ ಕೊಲೆ: ಅಪಘಾತವೆಂದು ಬಿಂಬಿಸಿದ್ದ ಆರೋಪಿ ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 15:34 IST
Last Updated 22 ಡಿಸೆಂಬರ್ 2025, 15:34 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಜಗಳ ನಡೆದು ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪದ ಮೇಲೆ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.  

ADVERTISEMENT

ಮಿಟ್ಟಿಗಾನಹಳ್ಳಿಯ ನಿವಾಸಿ ಗಾಯತ್ರಿ (55) ಕೊಲೆಯಾದ ಶಿಕ್ಷಕಿ. ಸರ್ಕಾರಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಾಯತ್ರಿ-ಅನಂತ್ ದಂಪತಿಗೆ ಪಿಯುಸಿ ಓದುತ್ತಿರುವ ಮಗಳಿದ್ದಾಳೆ. 

‘ದಂಪತಿ ನಡುವೆ ಆಗಾಗ್ಗೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ಪತ್ನಿಯನ್ನು ಕೊಲೆ ಮಾಡಲು ಆರೋಪಿ ಅನಂತ್ ಸಂಚು ರೂಪಿಸಿದ್ದ. ಮನೆ ಕಟ್ಟಲು ನಿರ್ಧರಿಸಿದ್ದು, ನಿವೇಶನ ತೋರಿಸುವುದಾಗಿ ಆಕೆಯನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದ.
ನಿವೇಶನದ ಬಳಿ ಹೋಗುತ್ತಿದ್ದಂತೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ನಂತರ ಅಪಘಾತದಲ್ಲಿ ಮೃತಪಟ್ಟಿದ್ದಾಳೆಂದು ಸ್ಥಳೀಯ ನಿವಾಸಿಗಳನ್ನು ನಂಬಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಕೂಟಿಯಲ್ಲಿ ಹಿಂಬದಿ ಕುಳಿತಿದ್ದ ಪತ್ನಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದಳು. ಆಗ ಆಕೆಯ ತಲೆ ಮೇಲೆ ಬೈಕ್‌ನ ಚಕ್ರ ಹರಿದ ಪರಿಣಾಮ ಮೃತಪಟ್ಟಳು ಎಂದು ಹೇಳಿದ್ದ. ಪೊಲೀಸರು ಮೃತದೇಹ ಪರಿಶೀಲಿಸಿದಾಗ ತಲೆಗೆ ಗಂಭೀರ ಗಾಯವಾಗಿರುವುದು ಕಂಡು ಬಂದಿದ್ದು, ಅಪಘಾತದಿಂದ ಆಗಿರುವುದಲ್ಲ ಎಂಬ ಶಂಕೆ ಮೂಡಿದೆ. ನಂತರ ಸಂಚಾರ ಪೊಲೀಸರು ಬಾಗಲೂರು ಠಾಣೆ ಪೊಲೀಸರಿಗೆ ವಿಷಯ ತಿಳಿಸಿದರು’ ಎಂದರು.

ಬಾಗಲೂರು ಠಾಣೆ ಪೊಲೀಸರು ಅನಂತ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.