ADVERTISEMENT

ಚಿಕಿತ್ಸೆ ಸಿಗದೆ ಆಸ್ಪತ್ರೆ ಎದುರೇ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 17:59 IST
Last Updated 12 ಜುಲೈ 2020, 17:59 IST
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ   

ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಸಿಗದೆ ವಿಕ್ಟೋರಿಯಾ ಆಸ್ಪತ್ರೆ ಗೇಟ್ ಎದುರೇ ಮೃತಪಟ್ಟಿದ್ದಾರೆ.

ದೇವನಹಳ್ಳಿಯ ಉಮಾದೇವಿ (60) ಎಂಬುವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕುಟುಂಬದವರು ಕರೆದೊಯ್ದಿದ್ದರು. ಕೊರೊನಾ ಸೋಂಕಿನ ಶಂಕೆ ವ್ಯಕ್ತಪಡಿಸಿದ ವೈದ್ಯರು, ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.

ಅಲ್ಲಿಂದ ಕಿಮ್ಸ್ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಹಾಸಿಗೆ ಸಿಗದ ಕಾರಣ ವಿಕ್ಟೋರಿಯಾ ಆಸ್ಪತ್ರೆ ಬಳಿಗೆ ಮಹಿಳೆಯನ್ನು ಕುಟುಂಬದವರು ಕರೆತಂದರು. ಆದರೆ, ಆಸ್ಪತ್ರೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಕೋವಿಡ್‌ ಪರೀಕ್ಷೆ ಆಗಿದ್ದರೆ ಅಥವಾ ಬಿಬಿಎಂಪಿ ಮೂಲಕ ಬಂದರೆ ಮಾತ್ರ ದಾಖಲಿಸಿಕೊಳ್ಳುವುದಾಗಿ ಅಲ್ಲಿನ ಸಿಬ್ಬಂದಿ ತಿಳಿಸಿದರು.

ADVERTISEMENT

ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಪ್ರಾಥಮಿಕ ಚಿಕಿತ್ಸೆಯನ್ನಾದರೂ ನೀಡುವಂತೆ ಮಕ್ಕಳು ಬೇಡಿಕೊಂಡರು. ಆದರೂ ಚಿಕಿತ್ಸೆ ದೊರೆಯಲಿಲ್ಲ. ಅಷ್ಟರಲ್ಲಿ ಮಹಿಳೆ ಆಸ್ಪತ್ರೆ ಗೇಟಿನ ಬಳಿಯೇ ಮೃತಪಟ್ಟರು.

ಇದರಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ಶವದೊಂದಿಗೆ ಅಲ್ಲಿಯೇ ಕುಳಿತರು. ಸಾವಿಗೆ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕಿತ್ಸೆಗಾಗಿ ಅಲೆದರು:ಕೊರೊನಾ ಸೋಂಕಿನ ಲಕ್ಷಣ ಇರುವ ಒಂದೇ ಕುಟುಂಬದ ಮೂವರು ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರು.

ವೃದ್ಧ ದಂಪತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಯೊಂದರಲ್ಲಿ ತಪಾಸಣೆಗೆ ಒಳಗಾದರು. ಇಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಿದ ವೈದ್ಯರು, ಪತಿಗೆ ಕೋವಿಡ್ ಲಕ್ಷಣಗಳಿರುವುದರಿಂದ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.

ಬಳಿಕ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ ಬಳಿಕ ಪತಿಯನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಯಿತು. ಪತ್ನಿ ಮತ್ತು ಮಗಳಿಗೂ ಕೊರೊನಾ ಲಕ್ಷಣಗಳಿದ್ದು, ಅವರಿಗೆ ಯಾವ ಆಸ್ಪತ್ರೆಯಲ್ಲೂ ಪ್ರವೇಶ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.