ADVERTISEMENT

ಕ್ಯಾನ್ಸರ್ ಗೆದ್ದ ಮಹಿಳೆಯಿಂದ 11,830 ಅಡಿ ಚಾರಣ

8 ತಿಂಗಳ ಚಿಕಿತ್ಸೆಯಿಂದ ಸಹಜ ಜೀವನಕ್ಕೆ ಮರಳಿದ 51 ವರ್ಷದ ಅರ್ಚನಾ ಹೊಸಂಗಡಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:40 IST
Last Updated 19 ಜುಲೈ 2022, 15:40 IST
ಅರ್ಚನಾ ಹೊಸಂಗಡಿ (ಎಡದಿಂದ ಮೂರನೆಯವರು) ಜತೆಗೆ ಅಪೋಲೊ ಆಸ್ಪತ್ರೆ ವೈದ್ಯರಾದ ಡಾ. ರಾಣಿ ಅಖಿಲ್ ಭಟ್, ಡಾ. ಜಯಂತಿ ತುಮ್ಸಿ ಹಾಗೂ ಡಾ. ಮನೀಶ್ ಮಟ್ಟು ಇದ್ದಾರೆ. 
ಅರ್ಚನಾ ಹೊಸಂಗಡಿ (ಎಡದಿಂದ ಮೂರನೆಯವರು) ಜತೆಗೆ ಅಪೋಲೊ ಆಸ್ಪತ್ರೆ ವೈದ್ಯರಾದ ಡಾ. ರಾಣಿ ಅಖಿಲ್ ಭಟ್, ಡಾ. ಜಯಂತಿ ತುಮ್ಸಿ ಹಾಗೂ ಡಾ. ಮನೀಶ್ ಮಟ್ಟು ಇದ್ದಾರೆ.    

ಬೆಂಗಳೂರು: ‘ಕ್ಯಾನ್ಸರ್ ಕಾಯಿಲೆ ಆತ್ಮವಿಶ್ವಾಸವನ್ನು ಕುಗ್ಗಿಸಿತ್ತು. ರೋಗದ ಕಣಗಳು ನಾಶವಾದ ಬಳಿಕ ನನ್ನಲ್ಲಿನ ಛಲ ಮತ್ತು ಆಶಾವಾದ ಹೊಸ ಸವಾಲುಗಳಿಗೆ ತೆರೆದುಕೊಳ್ಳುವಂತೆ ಪ್ರೆರೇಪಿಸಿ, ಸಹಜ ಜೀವನಕ್ಕೆ ಮರಳಿಸಿತು. ಇದರಿಂದಾಗಿ 11,830 ಅಡಿ ಎತ್ತರದದಯಾರಾ ಬುಗ್ಯಾಲ್‌ ಚಾರಣ ಸಾಧ್ಯವಾಯಿತು.’

ಬೆಂಗಳೂರಿನ ಮಲ್ಲೇಶ್ವರದ ಅರ್ಚನಾ ಹೊಸಂಗಡಿ ಅವರ ಮನದಾಳದ ಮಾತುಗಳಿವು. ಕಾನ್ಸರ್ ಜಯಿಸಿದ ಅವರಿಗೀಗ 51 ವರ್ಷ. 2019ರ ಮೇ ತಿಂಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದ ಅರ್ಚನಾ, ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 2ನೇ ಹಂತದ ‘ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್’ ಇರುವುದನ್ನು ದೃಢಪಡಿಸಿದ ವೈದ್ಯರು, ಕಿಮೋಥೆರಪಿ ನೀಡಿದ್ದರು. 8 ತಿಂಗಳ ಸುದೀರ್ಘ ಚಿಕಿತ್ಸೆಯಿಂದ ಅವರು ಕ್ಯಾನ್ಸರ್ ಜಯಿಸಿದ್ದಾರೆ. ಈ ರೋಗ ಬಂದಲ್ಲಿ ಜೀವನ ಅಂತ್ಯವಲ್ಲ ಎಂಬ ಸಂದೇಶ ಸಾರಲು ಉತ್ತರಾಖಂಡದಲ್ಲಿ 5 ದಿನಗಳ ಚಾರಣ ನಡೆಸಿ, ಮರಳಿದ್ದಾರೆ. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ ಆಗಿರುವ ಅವರು, ಈಗ ಕೆಲಸಕ್ಕೆ ಮರಳಿದ್ದಾರೆ.

‘ಮೂರು ವರ್ಷಗಳ ಹಿಂದೆ ಸ್ತನದ ಭಾಗದಲ್ಲಿ ಗಡ್ಡೆ ಬೆಳೆದಿರುವುದು ಅನುಭವಕ್ಕೆ ಬಂದಿತು. ಕುಟುಂಬ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ, ಕ್ಯಾನ್ಸರ್ ಬಗ್ಗೆ ಸಂದೇಹ ವ್ಯಕ್ತಪಡಿಸಿ, ಹೆಚ್ಚಿನ ಪರೀಕ್ಷೆಗೆ ಶಿಫಾರಸು ಮಾಡಿದರು. ಅಪೋಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡೆ. ಮಾನಸಿಕವಾಗಿ ಸದೃಢಗೊಂಡಿದ್ದರಿಂದ ಚಿಕಿತ್ಸೆ ಪೂರ್ಣಗೊಂಡ ಎರಡು ತಿಂಗಳಲ್ಲಿ ಸಹಜ ಸ್ಥಿತಿಗೆ ಮರಳಿ, ಆರು ತಿಂಗಳ ಬಳಿಕ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು’ ಎಂದು ಅಪೋಲೊ ಆಸ್ಪತ್ರೆ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿಅರ್ಚನಾ ವಿವರಿಸಿದರು.

ADVERTISEMENT

‘ಚಾರಣ ಮಾಡಬೇಕು ಎಂಬ ಕನಸು ಮೊದಲಿನಿಂದ ಇತ್ತು. ಕ್ಯಾನ್ಸರ್ ಜಯಿಸಿದ ಏಳು ಮಂದಿಯ ಜತೆಗೆ ಹೆಜ್ಜೆ ಹಾಕಿದೆ. ರೋಗ ಕಾಣಿಸಿಕೊಂಡಾಗ ಹಾಗೂ ಚಾರಣ ಕೈಗೊಂಡಾಗ ಕುಟುಂಬದಿಂದ ಉತ್ತಮ ಪ್ರೋತ್ಸಾಹ ಸಿಕ್ಕಿತು.ಕ್ಯಾನ್ಸರ್ ಪೀಡಿತರಾದರೆ ಜೀವನ ಅಂತ್ಯವಲ್ಲ. ರೋಗ ವಾಸಿಯಾದ ಬಳಿಕ ಮೊದಲಿನಂತೆ ಜೀವನ ನಡೆಸಲು ಸಾಧ್ಯ’ ಎಂದರು.

‘ಬಹುತೇಕ ಮಹಿಳೆಯರು ತಮ್ಮ ಆರೋಗ್ಯ ಕಡೆಗಣಿಸುತ್ತಾರೆ. ಇದರಿಂದ ಸಮಸ್ಯೆ ಉಲ್ಬಣವಾಗಿ, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಹಿಳೆಯರು ತಮ್ಮನ್ನು ತಾವೇ ಆಗಾಗ ಪರೀಕ್ಷೆಗೆ ಒಳಪಡಿಸಿಕೊಂಡು, ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಎಂಟು ಮಂದಿ ಚಾರಣದಲ್ಲಿ ಭಾಗಿ
‘ಅಪೋಲೊ ಕ್ಯಾನ್ಸರ್ ಕೇಂದ್ರವು ‘ಕ್ಯಾನ್ಸರ್ ನಂತರದ ಜೀವನ’ ಎಂಬ ಕಾರ್ಯಕ್ರಮದಡಿ ‘ಉತ್ತುಂಗದ ಶಿಖರವೇರಿ ಕ್ಯಾನ್ಸರ್ ಜಯಿಸಿ’ ಎಂಬ ಉಪಕ್ರಮ ರೂಪಿಸಿದೆ. ಕ್ಯಾನ್ಸರ್ ಚಿಕಿತ್ಸೆಯ ನಂತರ ಸಕಾರಾತ್ಮಕ ಜೀವನದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.2022ರ ಜೂನ್ ತಿಂಗಳಲ್ಲಿ ಚಾರಣ ನಡೆಸಲಾಗಿತ್ತು. ಅರ್ಚನಾ ಸೇರಿದಂತೆ ಕ್ಯಾನ್ಸರ್‌ನಿಂದ ಗುಣಮುಖರಾದ ದೇಶದ ವಿವಿಧ ಭಾಗಗಳ ಎಂಟು ಮಂದಿ ಚಾರಣದಲ್ಲಿ ಪಾಲ್ಗೊಂಡಿದ್ದರು’ ಎಂದು ಅಪೋಲೊ ಆಸ್ಪತ್ರೆ ಕ್ಯಾನ್ಸರ್ ತಜ್ಞೆ ಡಾ. ರಾಣಿ ಅಖಿಲ್ ಭಟ್ ತಿಳಿಸಿದರು.

‘ನಾನೂ ಸೇರಿ ಇಬ್ಬರು ವೈದ್ಯರು ಚಾರಣದ ಭಾಗವಾಗಿದ್ದೆವು. ಇಬ್ಬರು ಶುಶ್ರೂಷಕರನ್ನು ಕರೆದೊಯ್ಯಲಾಗಿತ್ತು. ಆಂಬುಲೆನ್ಸ್ ಕೂಡ ಇತ್ತು. ಕ್ಯಾನ್ಸರ್ ಗೆದ್ದವರ ಜತೆಗಿನ ಚಾರಣ ರೋಮಾಂಚನಕಾರಿಯಾಗಿತ್ತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.