ADVERTISEMENT

ನಿಲ್ದಾಣದಲ್ಲಿ ನರಳಿ ಪ್ರಾಣಬಿಟ್ಟ ಮಹಿಳೆ: ಮಾನವೀಯತೆ ಮರೆತ ರೈಲ್ವೆ ಪೊಲೀಸರು, ಜನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 20:15 IST
Last Updated 17 ಜನವರಿ 2019, 20:15 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಗುರುವಾರ ರಾತ್ರಿ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೃತರು ಹುಬ್ಬಳ್ಳಿಯಿಂದ ರೈಲಿನಲ್ಲಿ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದ್ದು, ಅವರ ಹೆಸರು ಗೊತ್ತಾಗಿಲ್ಲ. ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

‘ಗಾಯಗೊಂಡಿದ್ದ ಮಹಿಳೆ, ಪ್ಲಾಟ್‌ಫಾರಂನಲ್ಲಿಯೇ ಅರ್ಧ ಗಂಟೆಯವರೆಗೆ ನರಳಾಡುತ್ತಿದ್ದರು. ಸ್ಥಳದಲ್ಲಿದ್ದ ಪ್ರಯಾಣಿಕರಾಗಲಿ ಅಥವಾ ರೈಲ್ವೆ ಪೊಲೀಸರಾಗಲಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿಲ್ಲ. ನಾನು ಸ್ಥಳಕ್ಕೆ ಹೋಗುವಷ್ಟರಲ್ಲೇ ತೀವ್ರ ರಕ್ತಸ್ರಾವದಿಂದಾಗಿ ಮಹಿಳೆ ಮೃತಪಟ್ಟಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿದ್ದರು. ಕಾಲುಗಳೆರಡು ಮಡಚಿದ್ದವು. ಮೈಯಲ್ಲೆಲ್ಲ ರಕ್ತ ಬರುತ್ತಿತ್ತು. ಸುತ್ತಮುತ್ತ ನಿಂತಿದ್ದ ಜನ, ಮಾನವೀಯತೆ ಮರೆತು ವಿಡಿಯೊ ಮಾಡುತ್ತಿದ್ದರು. ಯಾರೊಬ್ಬರೂ ಮಹಿಳೆಯ ರಕ್ಷಣೆಗೆ ಹೋಗಿರಲಿಲ್ಲ’ ಎಂದರು.

ಪೊಲೀಸರ ಬೇಜವಾಬ್ದಾರಿ: ‘ಯಶವಂತಪುರ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಇಂಥ ನಿಲ್ದಾಣದಲ್ಲಿ ಮಹಿಳೆ ನರಳಾಡಿ ಮೃತಪಟ್ಟಿದ್ದು, ಪೊಲೀಸರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ’ ಎಂದು ಪ್ರತ್ಯಕ್ಷದರ್ಶಿ ಹೇಳಿದರು.

‘ನಿಲ್ದಾಣದಲ್ಲಿ ಪೊಲೀಸರು, ದಿನದ 24 ಗಂಟೆಯೂ ಗಸ್ತು ತಿರುಗುತ್ತಿರಬೇಕು. ಆದರೆ, ಗುರುವಾರ ರಾತ್ರಿ ಮಹಿಳೆ ಬಿದ್ದಿದ್ದ ಸ್ಥಳದಲ್ಲಿ ಪೊಲೀಸರೇ ಇರಲಿಲ್ಲ. ದೂರದಲ್ಲಿದ್ದ ಪೊಲೀಸರು, ಮಹಿಳೆ ರಕ್ಷಣೆಗೆ ಹೋಗಿರಲಿಲ್ಲ. ಆ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ಪ್ರಶ್ನಿಸಿದಾಗ ಅಲ್ಲಿಯ ಸಿಬ್ಬಂದಿ, ‘ನಮಗ್ಯಾಕೆ ಬೇಕು. ಹಿರಿಯ ಅಧಿಕಾರಿಗಳು ಬರ್ತಾರೆ ಹೋಗಿ’ ಎಂಬ ಉಡಾಫೆ ಉತ್ತರ ನೀಡಿದರು’ ಎಂದು ಅವರು ತಿಳಿಸಿದರು.

‘ಈ ಘಟನೆಯಿಂದಾದರೂ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ನಿಲ್ದಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.