ADVERTISEMENT

ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಶಶಿಧರ್ ಕೋಸಂಬೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 18:47 IST
Last Updated 28 ಡಿಸೆಂಬರ್ 2025, 18:47 IST
<div class="paragraphs"><p>ಶಶಿಧರ್ ಕೋಸಂಬೆ</p></div>

ಶಶಿಧರ್ ಕೋಸಂಬೆ

   

ಬೆಂಗಳೂರು: ‘ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕ‌ಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸಂಬೆ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿರುವ ಮಹಿಳಾ ಪೊಲೀಸ್‌ ಠಾಣೆಗಳು ಪೊಲೀಸ್‌ ಇಲಾಖೆಯ ಬೇರೆ–ಬೇರೆ ಕಟ್ಟಡಗಳು ಹಾಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಸ್ನೇಹಿ ವಾತಾವರಣ ಇಲ್ಲದಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  

ADVERTISEMENT

‘ಮಹಿಳಾ ಪೊಲೀಸ್‌ ಠಾಣೆಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸುರಕ್ಷಿತ ಹಾಗೂ ಸುಸಜ್ಜಿತವಾದ ಕೋಣೆ ನಿರ್ಮಿಸಬೇಕು. ತಾಯಂದಿರು ತಮ್ಮ ಮಗುವಿನೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಮಗುವಿಗೆ ಎದೆ ಹಾಲನ್ನು ಕುಡಿಸಲು ಪ್ರತ್ಯೇಕ ಕೋಣೆ ಇರಬೇಕು. ಇದರ ಜೊತೆಗೆ ಮಗುವಿನ ವಿಶ್ರಾಂತಿಗಾಗಿ ತೊಟ್ಟಿಲು, ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು’ ಎಂದು ತಿಳಿಸಿದ್ದಾರೆ. 

‘ಮಕ್ಕಳ ಮನರಂಜನೆಗೆ ಮತ್ತು ಆಟಗಳಿಗೆ ಸೂಕ್ತ ಸ್ಥಳ, ಪ್ರಥಮ ಚಿಕಿತ್ಸೆ ಪಟ್ಟಿಗೆ ಇರುವಂತೆ ನೋಡಿಕೊಳ್ಳಬೇಕು. ಇದೆಲ್ಲವನ್ನೂ ಪರೀಕ್ಷಿಸಲು ನೋಡಲ್‌ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಈ ಎಲ್ಲ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.