ADVERTISEMENT

ಬೆಂಗಳೂರು|ಮಹಿಳೆಯರಿಗೆ ರಾತ್ರಿ ಪಾಳಿ ಬೇಡ

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:24 IST
Last Updated 15 ಮೇ 2025, 15:24 IST
ಬೆಂಗಳೂರಿನಲ್ಲಿ ಜೆಸಿಟಿಯು ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಎಸ್. ವರಲಕ್ಷ್ಮಿ ಮಾತನಾಡಿದರು. ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಜೆಸಿಟಿಯು ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಎಸ್. ವರಲಕ್ಷ್ಮಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಉದ್ದಿಮೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಕಡ್ಡಾಯ ಬೇಡ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸುವಂತೆ ಗುರುವಾರ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ದುಂಡು ಮೇಜಿನ ಸಭೆ ನಿರ್ಣಯ ಕೈಗೊಂಡಿದೆ.

ಮಹಿಳೆಯರ ಆರೋಗ್ಯ ಮತ್ತು ಪ್ರಜನನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ರಾತ್ರಿ ಪಾಳಿಗೆ ಅವಕಾಶ ಕಲ್ಪಿಸುವ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಕೆಲಸದ ಸಮಯ ಹೆಚ್ಚಳ ಬೇಡ. ಕನಿಷ್ಠ ವೇತನದಲ್ಲಿ ಮಹಿಳೆಯರಿಗೆ ತಾರತಮ್ಯ ಬೇಡ (ನಿರ್ದಿಷ್ಟವಾಗಿ ಗಾರ್ಮೆಂಟ್ಸ್), ಪ್ಲಾಂಟೇಶನ್, ಬೀಡಿ ತಯಾರಿಕೆ ಘಟಕ ಇತ್ಯಾದಿ ಎಲ್ಲಾ ಉದ್ಯಮಗಳಲ್ಲೂ ಸಮನಾದ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಸಭೆ ನಿರ್ಧಾರ ತೆಗೆದುಕೊಂಡಿದೆ.

ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಎಸ್‌.ವರಲಕ್ಷ್ಮೀ ಮಾತನಾಡಿ, ‘ಶೇಕಡ 94 ರಷ್ಟು ಮಹಿಳಾ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಹಾಗೂ ಶೇ 6ರಷ್ಟು ಮಹಿಳೆಯರು ಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಕನಿಷ್ಠ ವೇತನ, ಉದ್ಯೋಗ ಭದ್ರತೆ ಮತ್ತು ಕೆಲಸದ ಪರಿಸ್ಥಿತಿಗಳಲ್ಲಿ ತಾರತಮ್ಯ ಎದುರಿಸುತ್ತಿದ್ದಾರೆ. ದುಡಿಯುವ ಸ್ಥಳದಲ್ಲಿ ಕಿರುಕುಳ ಮತ್ತು ತಾರತಮ್ಯ ಮುಕ್ತ ವಾತಾವರಣ ಖಾತ್ರಿ ಪಡಿಸಬೇಕು. ಕೆಲಸದ ಗಂಟೆಗಳನ್ನು ಹೆಚ್ಚಿಸಲು ಕೆಲವು ಗಾರ್ಮೆಂಟ್ಸ್‌ಗಳಿಗೆ ಸರ್ಕಾರ ಕೊಟ್ಟಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು. 

ADVERTISEMENT

ಕಾರ್ಮಿಕ ಸಂಘಟನೆ ಮುಖಂಡರಾದ ಮೈತ್ರೇಯಿ ಕೃಷ್ಣನ್ ಮಾತನಾಡಿ, ‘ಕೇಂದ್ರ ಸರ್ಕಾರದ ಕಾರ್ಮಿಕ ಕಾಯ್ದೆ ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ನಿರಾಕರಿಸುತ್ತದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯುವುದರ ಜತೆಗೆ ಕೆಲಸದ ಸಮಯವನ್ನು 8 ರಿಂದ 12 ಗಂಟೆಗೆ ಏರಿಸಲು ಅವಕಾಶ ಇದೆ’ ಎಂದು ಹೇಳಿದರು.

ಆರೋಗ್ಯ, ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಯಾವ ರೀತಿ ಸಮಸ್ಯೆಗಳು ಉಂಟಾಗುತ್ತವೆ ಎಂಬುದರ ಕುರಿತು ವಿವಿಧ ಸಂಘಟಿತ ಕ್ಷೇತ್ರಗಳ ಮಹಿಳಾ ಕಾರ್ಮಿಕರು ಚರ್ಚಿಸಿದರು.

ಮನಶಾಸ್ತ್ರಜ್ಞೆ ಆರ್.ಅರ್ಚನಾ, ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಕಾರ್ಮಿಕ ಮುಖಂಡರಾದ ಜಯಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.