ADVERTISEMENT

ಲೇಖಕಿಯರ ಸಂಘ: ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ

ಅರ್ಧಕ್ಕೂ ಅಧಿಕ ಮತದಾರರು ಬೆಂಗಳೂರಿಗರು l ಮತದಾರರ ಓಲೈಕೆಗೆ ಅಭ್ಯರ್ಥಿಗಳ ಕಸರತ್ತು

ವರುಣ ಹೆಗಡೆ
Published 15 ಸೆಪ್ಟೆಂಬರ್ 2022, 20:02 IST
Last Updated 15 ಸೆಪ್ಟೆಂಬರ್ 2022, 20:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಈ ಬಾರಿಯ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬೆಂಗಳೂರು ಕೇಂದ್ರೀಕೃತವಾಗಿರುವ ಸಂಘವನ್ನು, ಪ್ರಾದೇಶಿಕ ಮಟ್ಟಕ್ಕೆ ಕೊಂಡೊಯ್ಯುವ ಭರವಸೆಯೊಂದಿಗೆ ಸ್ಪರ್ಧಿಗಳು ಮತಯಾಚಿಸುತ್ತಿದ್ದಾರೆ.

ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್, ಲೇಖಕಿ ಎಚ್.ಎಲ್. ಪುಷ್ಪಾ ಹಾಗೂ ಕಥೆಗಾರ್ತಿ ಶೈಲಜಾ ಸುರೇಶ್ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇದೇ 18ರಂದು ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಬಿ.‌ಎಂ.ಶ್ರೀ. ಪ್ರತಿಷ್ಠಾನ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ದಿನ ಸಂಜೆ ಫಲಿತಾಂಶ ಘೋಷಣೆ ಆಗಲಿದೆ. ಬೆಂಗಳೂರು ಹೊರತುಪಡಿಸಿ, ಹೊರ ಜಿಲ್ಲೆಯ ಸದಸ್ಯರು ಅಂಚೆ ಮೂಲಕ ಮತ ಚಲಾಯಿಸಲಿದ್ದಾರೆ. 1979ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಚೇರಿ ಹೊಂದಿದೆ.

ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ 2021ಕ್ಕೆ ಮುಕ್ತಾಯವಾಗಿತ್ತು. ಆದರೆ, ಕೋವಿಡ್ ಕಾರಣ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿಕೊಳ್ಳಲು ಸಲಹಾ ಸಮಿತಿ ಅವಕಾಶ ನೀಡಿತ್ತು. ಹಾಲಿ ಕಾರ್ಯಕಾರಿ ಸಮಿತಿಯೇ ಮತ್ತೊಂದು ಅವಧಿಗೆ ಮುಂದುವರಿಯುವುದಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಲೇಖಕಿ
ಯರಾದ ಹೇಮಲತಾ ಮಹಿಷಿ, ಬಿ.ಟಿ. ಲಲಿತಾ ನಾಯಕ್‌, ವಿಜಯಮ್ಮ, ಉಷಾ ಪಿ. ರೈ, ಕೆ.ಆರ್‌. ಸಂಧ್ಯಾ ರೆಡ್ಡಿ, ವಸುಂಧರಾ ಭೂಪತಿ ಮುಂತಾದವರು ಚುನಾವಣೆ ನಡೆಸುವಂತೆ ಸಹ
ಕಾರ ಸಂಘಗಳ ಇಲಾಖೆ ರಿಜಿಸ್ಟ್ರಾರ್‌ ಅವರಿಗೆ ಪತ್ರ ಬರೆದಿದ್ದರು. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.

ADVERTISEMENT

ಮೂರು ವರ್ಷ ಅವಧಿ: ಸಂಘದ ನಿಬಂಧನೆಗಳ ಪ್ರಕಾರ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಸಬೇಕು. ಕನಿಷ್ಠ 5 ವರ್ಷಗಳು ಸತತವಾಗಿ ಸಂಘದ ಸದಸ್ಯರಾಗಿರುವವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು. ಸತತ ಎರಡು ಅವಧಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರಿನಲ್ಲಿಯೇ ವಾಸವಿರಬೇಕು ಎಂದು ನಿಬಂಧನೆಯಲ್ಲಿದೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ವನಮಾಲಾ ಸಂಪನ್ನಕುಮಾರ್ ಅವರು ಪತ್ರಕರ್ತೆ, ಲೇಖಕಿ ಆರ್. ಪೂರ್ಣಿಮಾ ಅವರ ವಿರುದ್ಧ 20 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಲೇಖಕಿ ಟಿ. ಸುನಂದಮ್ಮ, ಎಚ್.ಎಸ್. ಪಾರ್ವತಿ, ಹೇಮಲತಾ ಮಹಿಷಿ, ನಾಗಮಣಿ ಎಸ್. ರಾವ್, ಶಶಿಕಲಾ ವೀರಯ್ಯ ಸ್ವಾಮಿ, ಉಷಾ ಪಿ. ರೈ, ಕೆ.ಆರ್. ಸಂಧ್ಯಾ ರೆಡ್ಡಿ, ಡಾ. ವಸುಂಧರಾ ಭೂಪತಿ ಹಾಗೂ ವನಮಾಲ ಸಂಪನ್ನಕುಮಾರ್ಈವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಲೇಖಕಿಯರ ಅಸ್ಮಿತೆ ಎತ್ತಿಹಿಡಿಯಲು ಕ್ರಮ’

ಎಲ್ಲ ಲೇಖಕಿಯರನ್ನು ಒಗ್ಗೂಡಿಸಿ,ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸದ್ಯ ರಾಜಧಾನಿ ಕೇಂದ್ರೀಕರಿಸಿ ಕಾರ್ಯಕ್ರಮ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಸಿದರೆ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿದೆ. ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕೊರಗು ಉತ್ತರ ಕರ್ನಾಟಕ ಭಾಗದ ಲೇಖಕಿಯರಲ್ಲಿದೆ. ಅಕಾಡೆಮಿಕ್ ವಲಯ ಹಾಗೂ ಸಾಮಾನ್ಯ ವಲಯದ ಲೇಖಕಿಯರ ನಡುವಿನ ಅಂತರ ಹೋಗಲಾಡಿಸಲು ಕ್ರಮವಹಿಸುತ್ತೇನೆ.

- ಶೈಲಜಾ ಸುರೇಶ್

‘ಸುಸಜ್ಜಿತ ಕಟ್ಟಡ, ಸಭಾಂಗಣಕ್ಕೆ ಕ್ರಮ’

ಕೋವಿಡ್ ಬಿಕ್ಕಟ್ಟಿನಿಂದಾಗಿ ಎರಡು ವರ್ಷಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, ರೂಪಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೋವಿಡ್ ಅಡ್ಡಿಪಡಿಸಿತು. ಆದ್ದರಿಂದ ಮತ್ತೊಂದು ಅವಧಿಗೆ ಸ್ಪರ್ಧಿಸಿದ್ದೇನೆ. ಸಂಘಕ್ಕೆ ಸುಸಜ್ಜಿತ ಕಟ್ಟಡ ಹಾಗೂ ಸಭಾಂಗಣದ ಅಗತ್ಯವಿದೆ. ಇದನ್ನು ಸಾಕಾರಗೊಳಿಸಲು ಶ್ರಮಿಸುವೆ. ಪ್ರತಿ ಜಿಲ್ಲೆಯಲ್ಲಿಯೂ ಮಹಿಳಾ ಸಮಾವೇಶ ನಡೆಸಲಾಗುವುದು.

- ವನಮಾಲಾ ಸಂಪನ್ನಕುಮಾರ್

‘ಪ್ರಾದೇಶಿಕ ಸಮ್ಮೇಳನ ಆಯೋಜನೆ’

ಪ್ರಾದೇಶಿಕ ಸಮ್ಮೇಳನಗಳನ್ನು ನಡೆಸಲಾಗುವುದು. ಸದ್ಯ ಸಂಘಕ್ಕೆ ಸುಸಜ್ಜಿತ ಕಟ್ಟಡವಿಲ್ಲ. ಆದ್ದರಿಂದ ಸ್ವಂತ ಕಟ್ಟಡ ಹಾಗೂ ಸಭಾಂಗಣಕ್ಕೆ ಪ್ರಯತ್ನ ಮಾಡುತ್ತೇನೆ. ಇ–ಗ್ರಂಥಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸದ್ಯ ಇರುವ ಗ್ರಂಥಾಲಯವನ್ನು ಮಹಿಳಾ ಅಧ್ಯಯನ ಕೇಂದ್ರವಾಗಿ ರೂಪಿಸಲಾಗುವುದು. ಹೊಸ ತಲೆಮಾರನ್ನು ವಿಶ್ವಾಸಕ್ಕೆ ಪಡೆದು, ಮುನ್ನಡೆಯುತ್ತೇನೆ. ಈ ಹಿಂದಿನವರು ನಡೆಸಿಕೊಂಡು ಬಂದ ಉತ್ತಮವಾದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು.

- ಎಚ್.ಎಲ್. ಪುಷ್ಪಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.