ADVERTISEMENT

ಕಿವಿಗೊಟ್ಟು ಕೇಳಿ ಹೆಂಗರುಳ ಕೂಗು

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ವಿಶ್ವ ಮಹಿಳಾ ದಿನದಲ್ಲಿ ಗಂಭೀರ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:46 IST
Last Updated 8 ಮಾರ್ಚ್ 2020, 20:46 IST
ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರ ಸಾಧನೆ ಬಿಂಬಿಸುವ ಪ್ರದರ್ಶನ ನಡೆಯಿತು –ಪ್ರಜಾವಾಣಿ ಚಿತ್ರ
ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾಧಕಿಯರ ಸಾಧನೆ ಬಿಂಬಿಸುವ ಪ್ರದರ್ಶನ ನಡೆಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವ ಮಹಿಳಾ ದಿನದ ಪ್ರಯುಕ್ತ ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಭಾನುವಾರ ಹೆಂಗರುಳಿನ ಪಿಸುದನಿಯ ಕೂಗನ್ನು ಆಲಿಸುವ ಪ್ರಯತ್ನ ನಡೆಯಿತು.

ಪುರುಷನಾಗಿಯೇ ಹುಟ್ಟಿದರೂ, ಮಹಿಳೆಯ ಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಬಾಲ್ಯಾವಸ್ಥೆಯಲ್ಲೇ ಗುರುತಿಸಿ ಅವರ ನೋವನ್ನು ಅರಿಯುವ ಪ್ರಯತ್ನ ನಡೆಯಬೇಕು, ಹೊಡೆದು, ಬಡಿದು, ಅವರ ಅಳಲನ್ನು ಕೇಳದೆ ಹೋಗಿರುವ ಸಮಾಜಕ್ಕೆ ಅವರಲ್ಲೂ ಒಂದು ಮನಸ್ಸಿದೆ ಎಂಬುದನ್ನು ತಿಳಿಸುವ ಅಪರೂಪದ ಕೆಲಸ ನಡೆಯಿತು.

‘ಪುರುಷರೂ ಅಳಬಹುದು’ ಎಂಬುದು ಚರ್ಚೆಯ ವಿಷಯ. ಸಮಾಜಿಕ ಕಾರ್ಯಕರ್ತೆ ರೋಹಿಣಿ ನಿಲೇಕಣಿ ಚರ್ಚೆಯನ್ನು ನಡೆಸಿಕೊಟ್ಟವರು. ಡಾ.ಶೇಖರ್‌ ಶೇಷಾದ್ರಿ, ಆತಿಯಾ ಬೋಸ್‌ ಮತ್ತು ಅಕ್ಷತ್‌ ಸಿಂಘಾಲ್‌ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ADVERTISEMENT

‘ತೃತೀಯ ಲಿಂಗಿಗಳು ಎಂಬ ವರ್ಗ ಸಮಾಜದಲ್ಲಿ ಸೃಷ್ಟಿಯಾಗಿದೆ, ಆದರೆ, ಅದಕ್ಕಿಂತಲೂ ಮುಖ್ಯವಾಗಿ, ಹೆಣ್ಣಿನ ಭಾವನೆ ಹೊಂದಿರುವ ಗಂಡಿನ ಮನೋಭಾವ, ತುಮುಲ, ದುಗುಡ, ಕಷ್ಟಗಳನ್ನು ಅರಿಯುವ ಪ್ರಯತ್ನ ಇದುವರೆಗೆ ನಡೆದೇ ಇಲ್ಲ. ಕ್ರೋಮೋಸೋಮ್‌ಗಳ ಪ್ರಭಾವದಿಂದ ಆಗುವ ಇಂತಹ ಹೆಂಗರುಳ ಪರಿಸ್ಥಿತಿಯನ್ನು ಸಮಾಜ ಇನ್ನಷ್ಟು ಸೂಕ್ಷ್ಮವಾಗಿ ನೋಡಬೇಕು’ ಎಂದು ಡಾ.ಶೇಖರ್ ಶೇಷಾದ್ರಿ ಅಭಿಪ್ರಾಯಪಟ್ಟರು.

‘ಹುಡುಗಿಯ ಮನೋಭಾವ ಇರುವ ಹುಡುಗರ ಭಾವನೆಯನ್ನು ಅರಿಯುವ ಕೆಲಸ ನಡೆಯುತ್ತಲೇ ಇಲ್ಲ. ಹೊಡೆದು, ಬಡಿದು ಅವರ ಬಾಯಿ ಮುಚ್ಚಿಸಲಾಗುತ್ತಿದೆ. ನಾನು ಇಂತಹ ಸಾವಿರಾರು ಪ್ರಕರಣಗಳನ್ನು ಹತ್ತಿರದಿಂದ ನೋಡಿದ್ದೇನೆ’ ಎಂದು ಅಕ್ಷತ್‌ ಸಿಂಘಾಲ್ ಹೇಳಿದರು.

‘ಬಾಲಕಿಯರಿಗೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಸ್ವರೂಪ ವಿಭಿನ್ನವಿರುತ್ತದೆ. ಇದನ್ನು ಸ್ಪಷ್ಟವಾಗಿ ಗುರುತಿಸುವ ಪ್ರಯತ್ನ ನಡೆಯಬೇಕಿದೆ’ ಎಂದು ಅತಿಯಾ ಬೋಸ್‌ ಹೇಳಿದರು.

‘ದೇಶದಲ್ಲಿ ಇಂದು 18ರಿಂದ 30 ವರ್ಷದೊಳಗಿನ ಯುವಕರ ಸಂಖ್ಯೆ 23 ಕೋಟಿಯಷ್ಟಿದೆ. ಇವರ ಆಶಯಗಳು, ಕಾಮನೆಗಳ ಸ್ವರೂಪ ವಿಭಿನ್ನ. ಆದರೆ ಅವರೊಳಗೆಯೇ ಅದೆಷ್ಟೋ ಮನೋವಿಕಾರಗಳು ಇರುತ್ತವೆ. ಬಾಲ್ಯಾವಸ್ಥೆಯಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದರೆ ಯೌವನಾವಸ್ಥೆಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಸುಲಭವಾಗುತ್ತದೆ, ಇಂತಹ ವಿಚಾರಗಳತ್ತ ಸಮಾಜ ಗಮನ ಹರಿಸಬೇಕು’ ಎಂದು ರೋಹಿಣಿ ನಿಲೇಕಣಿ ಅಭಿಪ್ರಾಯಪಟ್ಟರು.

ಮಹಿಳಾ ದಿನದ ಪ್ರಯುಕ್ತಬಿಐಸಿಯಲ್ಲಿ ‘ನಮ್ಮ ನಡೆ ಸಮಾನತೆಯ ಕಡೆಗೆ’ ಕುರಿತು ಚರ್ಚೆ, ‘ಪುರುಷತ್ವ ವಿಷಯವೇ ಬಿಕ್ಕಟ್ಟಿನಲ್ಲಿದೆಯೇ’ ಎಂಬ ವಿಷಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಗಾಯಕಿ ಎಂ.ಡಿ.ಪಲ್ಲವಿ ಅವರು 12ನೇ ಶತಮಾನದ ಶರಣೆಯರ ವಚನಗಳ ಗಾಯನ ನಡೆಸಿಕೊಟ್ಟದ್ದು ವಿಶಿಷ್ಟ ಭಾವ ಸೃಷ್ಟಿಸಿತು.

*
ದೇಶದಲ್ಲಿ 7 ಕೋಟಿ ಮಹಿಳೆಯರು ಸ್ವಸಹಾಯ ಸಂಘದಲ್ಲಿದ್ದಾರೆ. ಒಂದಿಷ್ಟು ಆರ್ಥಿಕ ಶಕ್ತಿ ಬಂದಿದೆ, ಮಹಿಳಾ ಸಮಾನತೆ ಇನ್ನೂ ಸಾಧಿಸಲಾಗಿಲ್ಲ.
–ರೋಹಿಣಿ ನಿಲೇಕಣಿ, ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.