ADVERTISEMENT

‘ಮನೆಯಿಂದಲೇ ಕೆಲಸ’ ನಂಬಿಸಿ ₹ 2.85 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 16:16 IST
Last Updated 6 ಜೂನ್ 2021, 16:16 IST

ಬೆಂಗಳೂರು: ‘ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ’ ಎಂಬ ಜಾಹೀರಾತು ನಂಬಿ ನಗರದ ಮಹಿಳೆಯೊಬ್ಬರು ₹ 2.85 ಲಕ್ಷ ಕಳೆದುಕೊಂಡಿದ್ದು, ಈ ವಂಚನೆ ಸಂಬಂಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೆ.ಪಿ.ನಗರದ 38 ವರ್ಷದ ಮಹಿಳೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲಾಕ್‌ಡೌನ್‌ ಇರುವುದರಿಂದ ಮನೆಯಲ್ಲೇ ಕುಳಿತು ಕೆಲಸ ಮಾಡಲು ಯೋಚಿಸಿದ್ದ ಮಹಿಳೆ, ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದರು. ‘ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ’ ಎಂಬ ಜಾಹೀರಾತು ನೋಡಿ ‘ಐಟಿಸಿ7777 ಡಾಟ್ ಕಾಮ್’ ಜಾಲತಾಣದಲ್ಲಿ ನೋಂದಣಿ ಮಾಡಿಕೊಂಡಿದ್ದರು.’

ADVERTISEMENT

‘ಜಾಲತಾಣದ ಪ್ರತಿನಿಧಿ ಎಂದು ಹೇಳಿ ಕರೆ ಮಾಡಿದ್ದ ವಂಚಕ, ‘ಕೆಲಸ ಆರಂಭಿಸುವ ಮುನ್ನ ತರಬೇತಿ ನೀಡಬೇಕು. ಅದಕ್ಕಾಗಿ ಹಣ ಠೇವಣಿ ಇರಿಸಬೇಕು. ಆ ಹಣ ನಿಮ್ಮ ಖಾತೆಯಲ್ಲೇ ಇರುತ್ತದೆ. ಯಾವಾಗ ಬೇಕಾದರೂ ವಾಪಸು ಪಡೆಯಬಹುದು’ ಎಂದಿದ್ದ. ಆರೋಪಿ ಮಾತು ನಂಬಿದ್ದ ಮಹಿಳೆ, ಆತ ಹೇಳಿದ್ದ ಖಾತೆಗಳಿಗೆ ಹಂತ ಹಂತವಾಗಿ ₹ 2.85 ಲಕ್ಷ ಹಾಕಿದ್ದರು. ಅದಾದ ನಂತರ ಆರೋಪಿ, ಯಾವುದೇ ಕೆಲಸ ನೀಡಿಲ್ಲ. ಠೇವಣಿ ಹಣವನ್ನೂ ವಾಪಸು ಕೊಟ್ಟಿಲ್ಲ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಎಚ್ಚರಿಕೆ ವಹಿಸಿ: 'ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವೃದ್ಧರು ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಲು ಮುಂದಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಬರುವ ಜಾಹೀರಾತುಗಳನ್ನು ನಂಬಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಜಾಹೀರಾತು ನಂಬುವ ಮುನ್ನ ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.