ADVERTISEMENT

ಬೆಂಗಳೂರು: ಭೂಸ್ವಾಧೀನವಾಗದೆ ಕಾಮಗಾರಿ ನಡೆಯೊಲ್ಲ!

ಕೆಂಗೇರಿ ಹೊರವರ್ತುಲ ರಸ್ತೆಯ ಅನ್ನಪೂರ್ಣೇಶ್ವರಿನಗರ ಮುಖ್ಯರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್ ಕೆಲಸಕ್ಕೆ ಹಲವು ವಿಘ್ನ

ಆರ್. ಮಂಜುನಾಥ್
Published 11 ಜುಲೈ 2024, 23:45 IST
Last Updated 11 ಜುಲೈ 2024, 23:45 IST
ಅನ್ನಪೂರ್ಣೇಶ್ವರಿ ನಗರ ಮುಖ್ಯ‌ರಸ್ತೆ ಜಂಕ್ಷನ್‌ನಲ್ಲಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಗ್ರೇಡ್‌ ಸೆಪರೇಟರ್‌ ಕಾಮಗಾರಿ ನಡೆಯಬೇಕಾದ ಸ್ಥಳ
ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಅನ್ನಪೂರ್ಣೇಶ್ವರಿ ನಗರ ಮುಖ್ಯ‌ರಸ್ತೆ ಜಂಕ್ಷನ್‌ನಲ್ಲಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಗ್ರೇಡ್‌ ಸೆಪರೇಟರ್‌ ಕಾಮಗಾರಿ ನಡೆಯಬೇಕಾದ ಸ್ಥಳ ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಗ್ರೇಡ್ ಸೆಪರೇಟರ್‌ ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ, ಭೂಸ್ವಾಧೀನದ ಪ್ರಕ್ರಿಯೆ ಮುಗಿದಿಲ್ಲ. ಇದರಿಂದ ಕಾಮಗಾರಿ ಮುಂದುವರಿಯದೆ ಅನ್ನಪೂರ್ಣೇಶ್ವರಿನಗರದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.

ಕೆಂಗೇರಿ ಹೊರ ವರ್ತುಲ ರಸ್ತೆಯಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ ಬಳಿ ಅನ್ನಪೂರ್ಣೇಶ್ವರಿ ನಗರ ಮುಖ್ಯ‌ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ 2022ರ ಜುಲೈನಲ್ಲಿ ಆರಂಭವಾಗಿದೆ. ಕಾಂಪ್ಲೆಕ್ಸ್‌ಗೆ ಹೊಂದಿಕೊಂಡಂತೆ ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ನಡೆದಿದೆ. ಈ ತಡೆಗೋಡೆ ಹಾಗೂ ಚರಂಡಿ ನಡುವಿನ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಬೇಕಾಗಿದ್ದರೂ ಅದು ವಾಹನ ನಿಲುಗಡೆಯ ತಾಣವಾಗಿರುವುದು ಕಾಮಗಾರಿಯ ಪ್ರಗತಿ ಕುಂಟುತ್ತಾ ಸಾಗಿರುವುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.

ಮಾಗಡಿ ರಸ್ತೆ ಕಡೆಗೆ ಮುಕ್ತ ಸಂಚಾರಕ್ಕೆ ಅನುವಾಗಬೇಕಾಗಿದ್ದ ಈ ಗ್ರೇಡ್‌ ಸೆಪರೇಟರ್‌ನ ಕಾಮಗಾರಿ ಗಡುವಿನಂತೆ ನಡೆದಿದ್ದರೆ ಈಗಾಗಲೇ ವಾಹನ ಸಂಚಾರಕ್ಕೆ ಮುಕ್ತವಾಗಿ ಮೂರು ತಿಂಗಳಾಗಬೇಕಿತ್ತು. ಆದರೆ, ಇದು ಕೂಡ ಆರಂಭದ ಕಾಮಗಾರಿಯ ಸ್ಥಿತಿಯಲ್ಲಿಯೇ ನಿಂತಿದೆ. ಅನ್ನಪೂರ್ಣೇಶ್ವರಿನಗರ ಹಾಗೂ ಸುಮನಹಳ್ಳಿ ಹೊರವರ್ತುಲ ರಸ್ತೆಗೆ ಮುಕ್ತ ಸಂಚಾರವೂ ಈ ಗ್ರೇಡ್‌ ಸೆಪರೇಟರ್‌ನ ಉದ್ದೇಶವಾಗಿದ್ದರೂ, ಇದೀಗ ಅಲ್ಲಿನ ವಾಹನ ದಟ್ಟಣೆಗೆ ಕಾರಣವಾಗಿದೆ.

ADVERTISEMENT

ಟೆಂಡರ್‌ ಮೊತ್ತಕ್ಕಿಂತ ಶೇ 10ರಷ್ಟು ಪ್ರೀಮಿಯಂ ದರವನ್ನು ನೀಡಿ, ಟರ್ನ್ ಕೀ ಆಧಾರದಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ನಿಗದಿಯಾಗಿರುವ ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಬಿಬಿಎಂಪಿ ನೀಡುವಂತಿಲ್ಲವಾದರೂ, ವರ್ಷಾನುಗಟ್ಟಲೆ ಕಾಮಗಾರಿ ನಡೆದರೆ ಸ್ಥಳೀಯರು, ವಾಹನ ಸವಾರರು, ವ್ಯಾಪಾರಸ್ಥರಿಗೆ ಕಿರಿಕಿರಿಯ ಜೊತೆಗೆ ಆರ್ಥಿಕವಾಗಿ ನಷ್ಟವೂ ಉಂಟಾಗುತ್ತಿದೆ.

‘ಭೂಸ್ವಾಧೀನಕ್ಕೇ ₹16.50 ಕೋಟಿಯನ್ನು ಮೀಸಲಿಡಲಾಗಿದೆಯಾದರೂ, ಆ ಪ್ರಕ್ರಿಯೆಯನ್ನು ಬಿಬಿಎಂಪಿ ಅಧಿಕಾರಿಗಳು ಇನ್ನೂ ಮುಗಿಸಿಲ್ಲ. ಆದ್ದರಿಂದ ಕಾಮಗಾರಿಯ ಪ್ರಗತಿಗೆ ಹಿನ್ನಡೆಯಾಗಿದೆ’ ಎಂಬುದು ಕೆಲಸಗಾರರ ಮಾತು.

‘ಕಾಮಗಾರಿ ಆರಂಭಿಸಿದ ಮೇಲೆ ಭೂಸ್ವಾಧೀನವಾಗಿಲ್ಲ, ಪ್ರಕ್ರಿಯೆ ನಡೆಯಬೇಕು ಎಂದು ಸಬೂಬು ಹೇಳುವ ಬಿಬಿಎಂಪಿ ಎಂಜಿನಿಯರ್‌ಗಳು, ಗುತ್ತಿಗೆ ನೀಡುವ ಮುನ್ನವೇ ಕಾಮಗಾರಿಗೆ ಅಗತ್ಯ ಜಮೀನು ಲಭ್ಯವಿದೆಯೆ ಎಂಬುದನ್ನು ಖಚಿತಪಡಿಸಲು ಸಾಧ್ಯವಿಲ್ಲವೆ? ಇವರ ಯೋಜನಾಪಟ್ಟಿ ಹೆಚ್ಚಾಗಲು ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟು, ಜನರನ್ನು ಸಂಕಷ್ಟ ತಳ್ಳುತ್ತಿದ್ದಾರೆ’ ಎಂದು ಸ್ಥಳೀಯರಾದ ನಂದಕುಮಾರ್‌, ರಾಜೇಶ್‌, ರಂಗೇಗೌಡ ಅವರು ಆರೋಪಿಸಿದರು.

‘ವ್ಯಾಪಾರಕ್ಕೂ ಸಂಚಕಾರ’

‘ಅನ್ನಪೂರ್ಣೇಶ್ವರಿನಗರ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಗೆ ರಸ್ತೆಯನ್ನು ದೊಡ್ಡ ಪ್ರಮಾಣದಲ್ಲಿ ಅಗೆದು ಹಾಗೆಯೇ ಬಿಡಲಾಗಿದೆ. ಇಲ್ಲಿ ಕಾಮಗಾರಿಯೂ ನಡೆಯುತ್ತಿಲ್ಲ ರಸ್ತೆಯೂ ಇಲ್ಲದಂತಾಗಿದೆ. ಸುತ್ತಮುತ್ತಲೂ ವಾಣಿಜ್ಯ ಪ್ರದೇಶವಾಗಿದ್ದು ಗ್ರಾಹಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ನಮಗೆಲ್ಲ ವ್ಯಾಪಾರಕ್ಕೂ ತೊಂದರೆಯಾಗಿದೆ’ ಎಂದು ಮಳಿಗೆ ಮಾಲೀಕ ರಜತ್‌ ಅಳಲು ತೋಡಿಕೊಂಡರು.

‘ರಸ್ತೆಯೂ ಇಲ್ಲ ಕಾಮಗಾರಿ ಇಲ್ಲ’

‘ಬಿಡಿಎ ಕಾಂಪ್ಲೆಕ್ಸ್ ಕಾಲೇಜು ಹಾಗೂ ಉಪ ನೋಂದಣಾಧಿಕಾರಿ ಕಚೇರಿಗಳು ಈ ಜಂಕ್ಷನ್‌ನಲ್ಲೇ ಇವೆ. ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ವಾಹನ ದಟ್ಟಣೆ ಅತಿಯಾಗಿದೆ. ರಸ್ತೆಯನ್ನು ರಸ್ತೆಯಾಗಿ ಉಳಿಸದೆ ಕಾಮಗಾರಿಯನ್ನೂ ಮಾಡದೆ ಎರಡು ವರ್ಷದಿಂದ ನಮ್ಮ ಜೀವ ತಿನ್ನುತ್ತಿದ್ದಾರೆ. ನಿತ್ಯವೂ ಇಲ್ಲಿ ಓಡಾಡಲು ನಮಗೆಲ್ಲ ತೀರಾ ತೊಂದರೆಯಾಗಿದೆ’ ಎಂದು ಅಣ್ಣಪೂರ್ಣೇಶ್ವರಿ ನಗರದ ನಿವಾಸಿ ರಾಮಕೃಷ್ಣ ದೂರಿದರು.

‘ಆರು ತಿಂಗಳಲ್ಲಿ ಪೂರ್ಣ’

‘ಭೂಸ್ವಾಧೀನದ ಜೊತೆಗೆ ಬೆಸ್ಕಾಂ ಜಲಮಂಡಳಿಗಳ ಕೆಲಸಗಳು ‘ಯುಟಿಲಿಟಿ ಶಿಫ್ಟಿಂಗ್’ ಕಾರ್ಯಗಳು ಕಾಮಗಾರಿಯನ್ನು ವಿಳಂಬಗೊಳಿಸಿವೆ. ಇದೀಗ ಎಲ್ಲವನ್ನೂ ಸರಿಪಡಿಸಲಾಗಿದ್ದು ಅನ್ನಪೂರ್ಣೇಶ್ವರಿ ನಗರ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಇನ್ನು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.