ADVERTISEMENT

‘ಕ್ಷಯ ಮುಕ್ತ ಗ್ರಾಮ, ವಾರ್ಡ್ ನಿರ್ಮಾಣ’

ಸಚಿವ ಡಾ.ಕೆ. ಸುಧಾಕರ್ ಭರವಸೆ * ಆರೋಗ್ಯ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 16:01 IST
Last Updated 24 ಮಾರ್ಚ್ 2021, 16:01 IST
ಕಾರ್ಯಕ್ರಮವನ್ನು ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ಡಾ.ಕೆ.ವಿ. ತ್ರಿಲೋಕ ಚಂದ್ರ, ಡಾ. ಅರುಂಧತಿ ಚಂದ್ರಶೇಖರ್ ಹಾಗೂ ಡಾ. ಓಂಪ್ರಕಾಶ್ ಪಾಟೀಲ್ ಇದ್ದರು.
ಕಾರ್ಯಕ್ರಮವನ್ನು ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ಡಾ.ಕೆ.ವಿ. ತ್ರಿಲೋಕ ಚಂದ್ರ, ಡಾ. ಅರುಂಧತಿ ಚಂದ್ರಶೇಖರ್ ಹಾಗೂ ಡಾ. ಓಂಪ್ರಕಾಶ್ ಪಾಟೀಲ್ ಇದ್ದರು.   

ಬೆಂಗಳೂರು: ‌‘2025ರ ವೇಳೆಗೆ ಕರ್ನಾಟಕವನ್ನು ಕ್ಷಯರೋಗ (ಟಿಬಿ) ಮುಕ್ತ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕ್ಷಯ ಮುಕ್ತ ಗ್ರಾಮ, ವಾರ್ಡ್‌ ಎಂದು ಘೋಷಿಸುವ ಮೂಲಕ ವಿನೂತನ ಆಂದೋಲನವನ್ನು ರಾಜ್ಯದಾದ್ಯಂತ ನಡೆಸಲಾಗುತ್ತದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ವಿಶ್ವ ಕ್ಷಯರೋಗ ದಿನದ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಗತ್ತಿನಲ್ಲಿ ಪ್ರತಿ 22 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ವರ್ಷದಲ್ಲಿ 14 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಇದರಲ್ಲಿ ಮೂರನೇ ಒಂದರಷ್ಟು ಮರಣ ಪ್ರಕರಣಗಳು ದೇಶದಲ್ಲಿಯೇ ವರದಿಯಾಗುತ್ತಿದೆ. ಈಗಾಗಲೇ ನಮ್ಮ ದೇಶವನ್ನು ಪೋಲಿಯೊ ಮುಕ್ತ ಮಾಡಲಾಗಿದೆ. ಆದರೆ, ಇದಕ್ಕಿಂತ ಹಿಂದೆ ಕಾಣಿಸಿಕೊಂಡಿದ್ದ ಕ್ಷಯವನ್ನು ಇನ್ನೂ ಹೋಗಲಾಡಿಸಲು ಸಾಧ್ಯವಾಗಲಿಲ್ಲ. 2025ರ ವೇಳೆಗೆ ಕ್ಷಯ ಮುಕ್ತ ದೇಶ ನಿರ್ಮಾಣದ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ರಾಜ್ಯದಲ್ಲಿ ಕೂಡ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ’ ಎಂದರು.

ADVERTISEMENT

4 ಲಕ್ಷ ಮಂದಿ ಸಾವು: ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕ ಚಂದ್ರ, ‘ಕ್ಷಯಕ್ಕೆ ಪ್ರತಿವರ್ಷ ದೇಶದಲ್ಲಿ 4 ಲಕ್ಷದಿಂದ 5 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ದುರ್ಬಲ ವರ್ಗದ ಜನತೆಯನ್ನು ತಲುಪಿ, ಟಿಬಿ ಸೇವೆಗಳನ್ನು ಒದಗಿಸಲು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೋವಿಡ್‌ನಿಂದಾಗಿ ಕಳೆದ ವರ್ಷ ಈ ರೋಗದ ಪತ್ತೆ ಮತ್ತು ಚಿಕಿತ್ಸೆಗೆ ಸಮಸ್ಯೆಯಾಗಿತ್ತು. ಅಷ್ಟಾಗಿಯೂ ಅಧಿಕ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕ್ಷಯ ರೋಗಕ್ಕೆ ವಿಶೇಷ ಸೇವೆಗಳನ್ನು ಒದಗಿಸಲು ಹೆಚ್ಚಿನ ಪ್ರಯತ್ನ ಮಾಡಬೇಕಿದೆ’ ಎಂದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್, ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.