ADVERTISEMENT

ಮಹಿಳೆಯರ ಮೇಲೆ ಹಲ್ಲೆ: ಯಲಹಂಕದ ರೀಲ್ಸ್ ದಾಸ ಬಂಧನ

* ರಿಯಲ್ ಎಸ್ಟೇಟ್ ಏಜೆಂಟರು, ರೌಡಿಗಳ ಜೊತೆ ನಂಟು * ಸಹಚರರನ್ನು ಕಳುಹಿಸಿ ಅಮಾಯಕರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:03 IST
Last Updated 8 ಡಿಸೆಂಬರ್ 2023, 16:03 IST
ದಾಸ
ದಾಸ   

ಬೆಂಗಳೂರು: ಆಸ್ತಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಮಂಜುನಾಥ್ ಅಲಿಯಾಸ್ ದಾಸನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ದಾಸ, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ವಿಡಿಯೊ ಮಾಡುತ್ತಿದ್ದ. ಈತನ ವಿಡಿಯೊವನ್ನು ಹಲವರು ಲೈಕ್ ಮಾಡುತ್ತಿದ್ದರು. ಅಲ್ಲಾಳಸಂದ್ರದ ನಿವಾಸಿಯಾಗಿರುವ 45 ವರ್ಷದ ಮಹಿಳೆ ನೀಡಿರುವ ದೂರು ಆಧರಿಸಿ ದಾಸನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೊಲೆ ಆರೋಪಿಗೆ ಜಾಮೀನು ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದ ಆರೋಪದಡಿ ದಾಸ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ 2019ರಲ್ಲಿ ‍ಪ್ರಕರಣ ದಾಖಲಾಗಿತ್ತು. ಮೈ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಧರಿಸುತ್ತಿದ್ದ ದಾಸ, ಉದ್ದನೆಯ ತಲೆಕೂದಲು ಬಿಟ್ಟಿದ್ದ. ಇದೇ ವೇಷದಲ್ಲಿ ವಿಡಿಯೊ ಮಾಡುತ್ತಿದ್ದ. ಈತನ ಹೆಸರಿನಲ್ಲಿ ಅಭಿಮಾನಿಗಳ ಸಂಘವೂ ಇದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಯಲಹಂಕ ಹಾಗೂ ಸುತ್ತಮುತ್ತಲಿನ ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರು ಹಾಗೂ ರೌಡಿಗಳ ಜೊತೆ ದಾಸ ಒಡನಾಟ ಹೊಂದಿದ್ದ. ಈತ ಹಾಗೂ ಸಹಚರರು, ಆಸ್ತಿ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸಿ ಅಮಾಯಕರಿಗೆ ಜೀವ ಬೆದರಿಕೆಯೊಡುತ್ತಿದ್ದರು. ಸ್ಥಳೀಯ ರಾಜಕಾರಣಿಗಳ ಜೊತೆಯೂ ದಾಸ ಗುರುತಿಸಿಕೊಂಡಿದ್ದ’ ಎಂದು ಹೇಳಿದರು.

ನಿವೇಶನ ಗೋಡೆ ಕೆಡವಿ ಜಾತಿ ನಿಂದನೆ

‘ದೂರುದಾರ ಮಹಿಳೆಯ ತಾಯಿಗೆ ನ್ಯಾಯಾಲಯದ ಡಿಕ್ರಿ ಮೂಲಕ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಲಭ್ಯವಾಗಿದೆ. ಅಕ್ಟೋಬರ್ 19ರಂದು ಬೆಳಿಗ್ಗೆ ನಿವೇಶನಕ್ಕೆ ನುಗ್ಗಿದ್ದ ಆರೋಪಿಗಳು, ಗೋಡೆ ಕೆಡವಿದ್ದರು. ಇದನ್ನು ಪ್ರಶ್ನಿಸಿದ್ದ ದೂರುದಾರ ಮಹಿಳೆ ಹಾಗೂ ಅವರ ತಾಯಿಗೆ ಬೈದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆಯರನ್ನು ಎಳೆದಾಡಿ ಬಟ್ಟೆ ಹರಿದಿದ್ದ ಆರೋಪಿಗಳು, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಿದ್ದರು. ಜಾತಿ ನಿಂದನೆ ಮಾಡಿ, ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆಯರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು, ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಕೃತ್ಯದಲ್ಲಿ ದಾಸ ಹುಡುಗರು ಭಾಗಿ

‘ನ್ಯಾಯಾಂಗ ಬಡಾವಣೆಯ ನಿವಾಸಿ ರಾಮಮೂರ್ತಿ, ನಾಗರಾಜು, ಗೋಪಾಲ ಹಾಗೂ ದಾಸನ ಹುಡುಗರು ನಿವೇಶನಕ್ಕೆ ನುಗ್ಗಿ ಗಲಾಟೆ ಮಾಡಿದ್ದರು. ಅವರೆಲ್ಲರ ವಿರುದ್ಧ ಎಸ್‌.ಸಿ–ಎಸ್‌.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದ ಆರೋಪದಡಿ ಇದೀಗ ದಾಸನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ದಾಸ, ತನ್ನ ಸಹಚರರನ್ನು ಬಳಸಿಕೊಂಡು ಅಮಾಯಕರನ್ನು ಬೆದರಿಸುತ್ತಿದ್ದ ಮಾಹಿತಿ ಇದೆ. ಆರೋಪಿಯಿಂದ ಯಾರಾದರೂ ತೊಂದರೆ ಅನುಭವಿಸಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದರು.

ಅಪರಾಧ ಚಟುವಟಿಕೆಗಳಲ್ಲಿ ದಾಸ ಭಾಗಿಯಾಗುತ್ತಿದ್ದನೆಂಬ ಮಾಹಿತಿ ಇದೆ. ಈತನ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಲಾಗುವುದು

– ಬಿ.ಎಂ. ಲಕ್ಷ್ಮಿಪ್ರಸಾದ್, ಈಶಾನ್ಯ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.