ADVERTISEMENT

ಸವಾರರಿಗೆ‌ ಸವಾಲಾಗಿದೆ ‘ಸಂತೆ ವೃತ್ತ’: ವಾಹನಗಳ ಅಡ್ಡಾದಿಡ್ಡಿ ಸಂಚಾರ

ಕಿರಿದಾದ ಕೆಳಸೇತುವೆಯಲ್ಲಿ ದಟ್ಟಣೆ

ಮನೋಹರ್ ಎಂ.
Published 24 ಡಿಸೆಂಬರ್ 2021, 19:59 IST
Last Updated 24 ಡಿಸೆಂಬರ್ 2021, 19:59 IST
ಯಲಹಂಕ ರೈತರ ಸಂತೆ ಬಳಿಯ ಕೆಳಸೇತುವೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು (ಎಡಚಿತ್ರ) ಯಲಹಂಕ ರೈತರ ಸಂತೆ ಬಳಿ ಬಸ್‌ ತಂಗುದಾಣವಿಲ್ಲದೆ ಪ್ರಯಾಣಿಕರ ಪಡಿಪಾಟಲು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಯಲಹಂಕ ರೈತರ ಸಂತೆ ಬಳಿಯ ಕೆಳಸೇತುವೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿರುವುದು (ಎಡಚಿತ್ರ) ಯಲಹಂಕ ರೈತರ ಸಂತೆ ಬಳಿ ಬಸ್‌ ತಂಗುದಾಣವಿಲ್ಲದೆ ಪ್ರಯಾಣಿಕರ ಪಡಿಪಾಟಲು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಯಲಹಂಕ ಬಳಿ‌ಯರಾಷ್ಟ್ರೀಯ ಹೆದ್ದಾರಿ ಕೆಳಸೇತುವೆ ಮೂಲಕ ರೈತರ ಸಂತೆ ವೃತ್ತ ದಾಟುವ ವಾಹನ ಸವಾರರಿಗೆ ಪ್ರತಿದಿನ ಹೆಣಗಾಟ ತಪ್ಪಿದ್ದಲ್ಲ. ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಿಳಿಯುವ ಅವಧಿಯಲ್ಲಿ ಇಲ್ಲಿ ದಟ್ಟಣೆ ಉಂಟಾಗುತ್ತಿದೆ. ವಾಹನಗಳು ನಾಲ್ಕು ಕಡೆಗಳಿಂದಲೂ ಅಡ್ಡಾದಿಡ್ಡಿಯಾಗಿ ನುಗ್ಗುವುದರಿಂದ ಈ ವೃತ್ತ ದಾಟಿ ಸಾಗಲು ಗಂಟೆಗಟ್ಟಲೆ ಸಮಯ ತಗಲುತ್ತದೆ.

ಕೋಗಿಲು ವೃತ್ತ, ಬೆಂಗಳೂರು, ಜಕ್ಕೂರು, ಯಲಹಂಕ ಹಳೆಯ ಟೌನ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವೆಂಕಟಾಲ ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿ ಈ ಕೆಳ ಸೇತುವೆ.

ಕೆಲಸಕ್ಕೆ ಸ್ವಂತ ವಾಹನದಲ್ಲಿ ಹೋಗುವವರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಯಲಹಂಕದ ಸಂತೆಗೆ ತರಕಾರಿ–ಸೊಪ್ಪು ಹೊತ್ತು ತರುವ ಹಾಗೂ ಖರೀದಿದಾರರ ವಾಹನಗಳು ಒಂದೇ ಸಮಯಕ್ಕೆ ಇಲ್ಲಿ ಸಂಧಿಸುತ್ತವೆ. ಇದರಿಂದ ಕಿರಿದಾದ ಕೆಳಸೇತುವೆಯಲ್ಲಿ ಉಂಟಾಗುವ ದಟ್ಟಣೆ ನಿಯಂತ್ರಿಸಲು ಇಲ್ಲಿನ ಸಂಚಾರ ಪೊಲೀಸರೂ ಹೈರಾಣಾಗುತ್ತಾರೆ.

ADVERTISEMENT

‘ವಾಹನಗಳ ನಿಯಂತ್ರಣಕ್ಕಾಗಿ ಈ ವೃತ್ತದಲ್ಲಿ ಸಮರ್ಪಕವಾದ ಸಂಚಾರ ಸಿಗ್ನಲ್ ಇಲ್ಲ. ಇರುವ ಸಣ್ಣ ಸಿಗ್ನಲ್‌ಗಳು ಆಗಾಗ ಕೆಟ್ಟುಹೋಗುತ್ತಿವೆ. ಇದರಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿ ದಟ್ಟಣೆ ಎದುರಾಗುತ್ತದೆ. ಯಲಹಂಕದಲ್ಲಿ ಪ್ರತಿದಿನ ನಡೆಯುವ ‘ರೈತರ ಸಂತೆ’ಗೆ ನಗರದ ಹೊರಭಾಗಗಳಿಂದ ‌ಬರುವ ಭಾರಿ ವಾಹನಗಳಿಂದ ಜಕ್ಕೂರು ಮುಖ್ಯರಸ್ತೆಯಲ್ಲಿ ಮುಂಜಾನೆಯಿಂದ ಬೆಳಿಗ್ಗೆ 10ರವರೆಗೆ ದಟ್ಟಣೆ ಅಧಿಕವಾಗಿರುತ್ತದೆ.‌ ಭಾನುವಾರವಂತೂ ಇಲ್ಲಿನ ಎಲ್ಲ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯ’ ಎಂದು ದೂರುತ್ತಾ ಯಲಹಂಕ ನಿವಾಸಿ ಸೋಮಶೇಖರ್.

‘ದೊಡ್ಡ ಟ್ರಕ್‌, ಲಾರಿ ಅಥವಾ ಬಸ್‌ ಕೆಳಸೇತುವೆ ದಾಟುವ ಸಮಯದಲ್ಲಿ ವಾಹನ ಸಂಚಾರಕೆಲಕಾಲ ಸ್ಥಗಿತವಾಗುತ್ತದೆ. ಕೆಲವು ಬಾರಿ ಕೋಗಿಲು ವೃತ್ತದಿಂದ ರೈತರ ಸಂತೆ ವೃತ್ತದವರೆಗೂ ವಾಹನಗಳ ಸಾಲನ್ನು ನೋಡಬಹುದು. ಅರ್ಧಗಂಟೆ ನಿಂತರೂ ದಟ್ಟಣೆ ತಗ್ಗುವುದಿಲ್ಲ. ಇತ್ತ ಬೆಂಗಳೂರು ಕಡೆಯಿಂದ ವೇಗವಾಗಿ ಬರುವ ವಾಹನಗಳು ಸೇತುವೆ ಕೆಳಗೆ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಉದಾಹರಣೆಗಳೂ ಇವೆ’ ಎಂದರು.

‘ಚಿಕ್ಕಬಳ್ಳಾಪುರದಿಂದ ಯಲಹಂಕಕ್ಕೆ ಪ್ರತಿ ದಿನ ಬಸ್‌ನಲ್ಲಿ ಬರುತ್ತೇನೆ. ಕೋಗಿಲು ವೃತ್ತದಿಂದ ಸಂತೆ ವೃತ್ತದವರೆಗೆ ಬಸ್‌ ಹೋಗುವಷ್ಟರಲ್ಲಿ ಅರ್ಧಗಂಟೆಯಾಗುತ್ತದೆ. ಹಾಗಾಗಿ, ಮಾರ್ಗ ಮಧ್ಯೆ ಇಳಿದುಕೊಂಡು ನಡೆದೇ ಹೋಗುತ್ತೇನೆ. ಇಲ್ಲಿನ ದಟ್ಟಣೆಯಿಂದಾಗಿ ಕಾಲೇಜಿಗೆ ಸಕಾಲದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ವಿದ್ಯಾರ್ಥಿ ಹರೀಶ್‌ ಬೇಸರ ವ್ಯಕ್ತಪಡಿಸಿದರು.

‘ಕೆಳಸೇತುವೆ ಮಾರ್ಗ ಕಿರಿದಾಗಿದ್ದು, ವಾಹನಗಳು ಎಲ್ಲೆಂದರಲ್ಲಿ ನುಗ್ಗುತ್ತವೆ. ಯಲಹಂಕಕ್ಕೆ ತೆರಳುವವರೂ ಇದೇ ಕೆಳಸೇತುವೆ ಮೂಲಕ ಸಾಗಬೇಕು. ಅಲ್ಲಿನ ಪಾದಚಾರಿ ಮಾರ್ಗಗಳಲ್ಲಿದನ ಕರುಗಳು ಮಲಗಿರುತ್ತವೆ. ಕೆಲವೊಮ್ಮೆ ಧುತ್ತೆಂದು ವಾಹನಗಳ ಎದುರು ಬರುತ್ತವೆ. ಇದರಿಂದ ಸಂಚಾರಕ್ಕೂ ಸಮಸ್ಯಯಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ವಿಭಜಕ ಅಳವಡಿಸಿ: ‘ಸೇತುವೆ ಕೆಳಗಿನ ಮಾರ್ಗದಲ್ಲಿ ರಸ್ತೆ ವಿಭಜಕ ಇಲ್ಲದ ಕಾರಣ ಕೆಲವೊಮ್ಮೆ ರಸ್ತೆಯಲ್ಲಿ ಸಾಗುವ ವಾಹನಗಳೆಲ್ಲವೂ ಏಕಮುಖವಾಗಿ ಸಂಚರಿಸಿ ದಟ್ಟಣೆ ಉಂಟು ಮಾಡುತ್ತವೆ. ಈ ಸಮಸ್ಯೆ ತಪ್ಪಿಸಲು ರಸ್ತೆ ವಿಭಜಕ ಅಳವಡಿಸಬೇಕಿದೆ. ಇದರಿಂದ ವಾಹನಗಳು ಎರಡೂ ಬದಿ ಸಂಚರಿಸಲು ಅನುಕೂಲವಾಗಲಿದೆ’ ಎಂದು ಅವರು ಖಾಸಗಿ ಕಂಪನಿ ಉದ್ಯೋಗಿ ನಿರಂಜನ್ ಸಲಹೆ ನೀಡಿದರು.

ತಂಗುದಾಣ ನಿರ್ಮಾಣಕ್ಕೆ ಒತ್ತಾಯ
‘ದೇವನಹಳ್ಳಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಆಂಧ್ರಪ್ರದೇಶದ ಬರುವ ಬಸ್‌ಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಯಲಹಂಕಕ್ಕೆ ಪ್ರತಿನಿತ್ಯ ಬಂದು ಹೋಗುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು. ಆದರೆ, ಪ್ರಯಾಣಿಕರ ಆಶ್ರಯಕ್ಕೆ ಎರಡೂ ಬದಿ ಸೂಕ್ತ ಬಸ್‌ ತಂಗುದಾಣಗಳಿಲ್ಲ. ಸುಡು ಬಿಸಿಲು, ಮಳೆಯಲ್ಲೂವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯಲ್ಲೇ ನಿಂತು ಬಸ್‌ಗಾಗಿ ಕಾದಿರುತ್ತಾರೆ. ಎರಡೂ ರಸ್ತೆಯಲ್ಲಿ ಬಸ್‌ ತಂಗುದಾಣ ನಿರ್ಮಿಸುವಷ್ಟು ಜಾಗ ಇದೆ. ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿ ತಂಗುದಾಣಗಳನ್ನು ನಿರ್ಮಿಸಿದರೆ, ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಹುಣಸಮಾರನಹಳ್ಳಿಯ ರಾಘವೇಂದ್ರ ಮನವಿ ಮಾಡಿದರು.

*
ಯಲಹಂಕ ಕೆಳಸೇತುವೆ ಬಳಿ ಶೀಘ್ರವಾಗಿ ಸಂಚಾರ ಸಿಗ್ನಲ್ ಅಳವಡಿಸಿದರೆ, ದಟ್ಟಣೆ ತಗ್ಗಲಿದೆ. ವಾಹನಗಳ ವೇಗ ಚಾಲನೆಯೂ ತಡೆ ನೀಡಬಹುದು.
-ಚಿರಂತ್, ವಿದ್ಯಾರ್ಥಿ

*
ರೈತರ ಸಂತೆಗೆ ಬರುವ ಭಾರಿ ವಾಹನಗಳು ರಸ್ತೆಯಲ್ಲೇ ಹೆಚ್ಚು ಸಮಯ ನಿಲ್ಲುತ್ತವೆ. ಇದರಿಂದ ದಟ್ಟಣೆ ಹೆಚ್ಚು. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು.
-ಪವನ್‌, ಯಲಹಂಕ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.