
ಯಲಹಂಕ: ಜಲಸಿರಿ ಪ್ರತಿಷ್ಠಾನದ ಆಶ್ರಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಯಲಹಂಕದ ಅಮಾನಿ ಕೆರೆಯಲ್ಲಿ ಗಂಗಮ್ಮದೇವಿಗೆ ʼಲಕ್ಷದೀಪೋತ್ಸವʼ ನಡೆಸಲಾಯಿತು.
ಬೆಳಗ್ಗೆಯಿಂದ ಫಲಪಂಚಾಮೃತ ಅಭಿಷೇಕ, ಗಣಪತಿ ಪೂಜೆ ಮತ್ತು ಹೋಮ, ನವಗ್ರಹ, ಮೃತ್ಯುಂಜಯ ಹಾಗೂ ಗಂಗಾಪರಮೇಶ್ವರಿ ಹೋಮ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿದವು. ನಂತರ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಕೆರೆಗೆ ಬಾಗಿನ ಸಮರ್ಪಣೆ ಮಾಡಿದರು. ಸಂಜೆ ಹಸಿಕರಗ ಮಂಟಪದ ಕಲ್ಯಾಣಿಯಲ್ಲಿ ಈಶ್ವರ ಮತ್ತು ಗಂಗಾದೇವಿಗೆ ಪೂಜೆ ನೆರವೇರಿಸಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಕಾರ್ತಿಕ ದೀಪೋತ್ಸವವು ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ. ಧಾರ್ಮಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದ್ದು, ದೀಪ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ ಎಂಬ ನಂಬಿಕೆಯೂ ಇದೆ ಎಂದು ವಿಶ್ವನಾಥ್ ತಿಳಿಸಿದರು.
ನೂರಾರು ಮಹಿಳೆಯರು ಕಲ್ಯಾಣಿಯಲ್ಲಿ ಈಶ್ವರ ಮತ್ತು ಗಂಗಾದೇವಿಗೆ ದೀಪಗಳನ್ನು ಬೆಳಗಿ, ನೀರಿಗೆ ಬಿಡುವ ಮೂಲಕ ತಮ್ಮ ಹರಕೆ ತೀರಿಸಿದರು. ಕರಗ ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ದೃಶ್ಯ ಗಮನ ಸೆಳೆಯಿತು.
ಜಲಸಿರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಮು.ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಮುರಾರಿ ರಾಮು, ಎನ್.ಎನ್.ರಾಮಮೂರ್ತಿ, ವೈ.ಜಿ.ಮೂರ್ತಿ, ಸುರೇಂದ್ರಬಾಬು, ದಶರಥ, ಅನುಪಮಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.