ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಯಲಹಂಕದ ಕೂಲ್ ಕಂಫರ್ಟ್ ಲಾಡ್ಜ್‌ನ ಕೊಠಡಿಯಲ್ಲಿ ತಂಗಿದ್ದ ಪ್ರೇಮಿಗಳು ಮೃತಪಟ್ಟಿದ್ದು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ ಬಡ್ಡಿವಡ್ಡರ್ (25), ಕಾವೇರಿ ಬಡಿಗೇರ್ (22) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಲಾಡ್ಜ್‌ಗೆ ನೀಡಿದ್ದ ಗುರುತಿನ ಚೀಟಿ ಆಧರಿಸಿ ಮೃತ ಪ್ರೇಮಿಗಳ ಹೆಸರು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಠಾಣಾ ವ್ಯಾಪ್ತಿಯ ಕಿಚನ್ ಸಿಕ್ಸ್ ಫ್ಯಾಮಿಲ್ ರೆಸ್ಟೊರೆಂಟ್ ಕಟ್ಟಡದಲ್ಲಿ ಎಂಟು ಕೊಠಡಿಗಳ ಕೂಲ್ ಕಂಫರ್ಟ್ ಲಾಡ್ಜ್ ಇದೆ. ಅದರಲ್ಲಿ ಪ್ರೇಮಿಗಳು ತಂಗಿದ್ದರು. ಕೊಠಡಿಯಲ್ಲಿ ಬೆಂಕಿ ಕಾಣಿಸಿದ್ದನ್ನು ಗಮನಿಸಿದ್ದ ವಸತಿಗೃಹದ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಕೊಠಡಿ ಪರಿಶೀಲಿಸಿದಾಗ ಯುವಕ ಸಜೀವ ದಹನವಾಗಿದ್ದರೆ, ಯುವತಿಯ ಮೃತದೇಹವು ಶೌಚಾಲಯದಲ್ಲಿ ಪತ್ತೆ ಯಾಗಿತ್ತು ಎಂದು ಪೊಲೀಸರು ಹೇಳಿದರು.
ಕಾವೇರಿ ಸಮೀಪದ ಕಟ್ಟಡ ದಲ್ಲಿರುವ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರು. ಎಂಟು ದಿನಗಳಿಂದ ರಮೇಶ್ ಹಾಗೂ ಕಾವೇರಿ ಈ ವಸತಿ ಗೃಹದಲ್ಲಿ ತಂಗಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಇಬ್ಬರ ನಡುವೆ ಜಗಳವಾಗಿ ಮೊದಲಿಗೆ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಭಯದಿಂದ ಯುವತಿ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡು ಅಲ್ಲಿ ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ಯಿದೆ ಎಂದು ಪೊಲೀಸರು ಹೇಳಿದರು.
ವಿದ್ಯುತ್ ಶಾರ್ಟ್ ಸರ್ಕಿಟ್ ಘಟನೆಗೆ ಕಾರಣವಾಗಿರಬಹುದೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ‘ಸೋಕೊ’ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ಬಂದ ಬಳಿಕ ಘಟನೆ ಹೇಗಾಯಿತು ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.
ಪೆಟ್ರೋಲ್ ಕೊಂಡೊಯ್ದ ದೃಶ್ಯ ಸೆರೆ?: ಸಿ.ಸಿ.ಟಿ.ವಿ. ಪರಿಶೀಲನೆ ನಡೆಸಲಾಗಿದೆ. ಗುರುವಾರ ಮಧ್ಯಾಹ್ನದ ವೇಳೆ ಕಾವೇರಿ ಕೊಠಡಿಯಲ್ಲೇ ಇದ್ದರು. ರಮೇಶ್ ಹೊರಗೆ ಬಂದು ಬಾಟಲಿಯೊಂದಿಗೆ ವಸತಿಗೃಹ ಪ್ರವೇಶಿಸುತ್ತಿರುವ ದೃಶ್ಯ ಸೆರೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪೆಟ್ರೋಲ್ ಖರೀದಿಸಿ ಕೊಂಡೊಯ್ದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.