ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಿಸಲು ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಲಹಂಕದಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಂದ ಶುಕ್ರವಾರ ಅಹವಾಲು ಸ್ವೀಕರಿಸಿದ ಅವರು, ‘ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಲು 50 ಆಟೊ ಟಿಪ್ಪರ್‌ಗಳು ಹಾಗೂ 7 ಕಾಂಪ್ಯಾಕ್ಟರ್‌ಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಪ್ರಾಣಿಗಳ ಚಿಕಿತ್ಸೆಗಾಗಿ ದೊಡ್ಡ ಬೆಟ್ಟಹಳ್ಳಿಯಲ್ಲಿ ಪಶು ಚಿಕಿತ್ಸಾಲಯಕ್ಕಾಗಿ ಜಾಗ ಮೀಸಲಿರಿಸಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಪಶು ಚಿಕಿತ್ಸಾಲಯವನ್ನು ಪ್ರಾರಂಭಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಲು ತಿಂಗಳಿಗೊಮ್ಮೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿ ಎಂದು ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸೂಚಿಸಿದರು.
ಯಲಹಂಕ ವಲಯ ವ್ಯಾಪ್ತಿಯಲ್ಲಿ 23 ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ್ದು, ನಾಗರಿಕರಿಂದ ಬಂದಂತಹ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಇ-ಖಾತಾ ಮೇಳ: ಯಲಹಂಕದಲ್ಲಿ ನಡೆಯುತ್ತಿರುವ ಇ–ಖಾತಾ ಮೇಳಕ್ಕೆ ಭೇಟಿ ನೀಡಿದ ಮಹೇಶ್ವರ್ ರಾವ್, ನಗರದಾದ್ಯಂತ ಇ-ಖಾತಾ ಮೇಳ ಆಯೋಜಿಸಲಾಗಿದ್ದು, ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ ಯಲಹಂಕ ಕೆರೆಗೆ ಭೇಟಿನೀಡಿದ ಮಹೇಶ್ವರ್ ರಾವ್, ವಾಯು ವಿಹಾರ, ಸಸಿಗಳ ಪೋಷಣೆ ಸೇರಿದಂತೆ ನಿರ್ವಹಣೆ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಲು ಸೂಚಿಸಿದರು.
ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು. ಮಲ್ಲೇಶ್ವರ– ಸುಬ್ರಮಣ್ಯ ನಗರದಿಂದ 8ನೇ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್‌ಸಿ2) ಬಳಿ ರೈಲ್ವೆ ಕೆಳಸೇತುವೆ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತೆ ಮಮತಾ, ಮುಖ್ಯ ಎಂಜಿನಿಯರ್ ರಂಗನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.