ADVERTISEMENT

ಮಲಿನವಾಗುತ್ತಿದೆ ಜಲಕಾಯ: ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಕುತ್ತು ತಂದ ಕಸ

ನಿಲ್ಲದ ಒತ್ತುವರಿ–ಕಿರಿದಾಗುತ್ತಿದೆ ಕೆರೆಯಂಗಳ

ಸಚ್ಚಿದಾನಂದ ಕುರಗುಂದ
Published 23 ಡಿಸೆಂಬರ್ 2021, 19:33 IST
Last Updated 23 ಡಿಸೆಂಬರ್ 2021, 19:33 IST
ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಅಂಗಳದಲ್ಲಿ ಕಟ್ಟಡ ತ್ಯಾಜ್ಯ ಸುರಿದಿರುವುದು
ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಅಂಗಳದಲ್ಲಿ ಕಟ್ಟಡ ತ್ಯಾಜ್ಯ ಸುರಿದಿರುವುದು   

ಬೆಂಗಳೂರು: ಜನರ ಜೀವನಾಡಿಯಾಗಿರುವ ಈ ಜಲಕಾಯದ ಒಡಲು ಈಗ ಕಲುಷಿತಗೊಂಡಿದೆ. ಪ್ರಶಾಂತ ವಾತಾವರಣ, ಹಕ್ಕಿಗಳ ಕಲರವದೊಂದಿಗೆ ಆಹ್ಲಾದಕರವಾಗಿದ್ದ ಇಲ್ಲಿನ ಪರಿಸರಕ್ಕೆ ಧಕ್ಕೆ ತರುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಕಲುಷಿತ ನೀರಿನ ಸೇರ್ಪಡೆಯಿಂದ ಈ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ದುರ್ವಾಸನೆಯನ್ನೂ ಬೀರುತ್ತಿದೆ.

ಕೆ.ಆರ್‌.ಪುರ ಸಮೀಪದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ದುಃಸ್ಥಿತಿ ಇದು. ಐತಿಹಾಸಿಕವಾಗಿ ಮಹತ್ವ ಪಡೆದಿರುವ ಈ ವಿಶಾಲವಾದ ಕೆರೆಯಂಗಳವೂ ದಿನೇ ದಿನೇ ಕಿರಿದಾಗುತ್ತಿದೆ. ಒಳಚರಂಡಿಯ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ. ಕಟ್ಟಡ ತ್ಯಾಜ್ಯ ಮತ್ತು ವೈದ್ಯಕೀಯ ತ್ಯಾಜ್ಯಗಳು ಹಾಗೂ ರಾಸಾಯನಿಕಗಳು ಈ ಕೆರೆಯಂಗಳವನ್ನು ಹಾಳುಗೆಡಹುತ್ತಿದ್ದರೆ, ಇನ್ನೊಂದೆಡೆ ಒತ್ತುವರಿಯಿಂದಾಗಿ ಈ ಜಲಕಾಯದ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿದೆ.

ತಿಳಿ ನೀರಿನಿಂದ ನಳನಳಿಸುತ್ತಿದ್ದ ಈ ಕೆರೆ ಒಳಚರಂಡಿ ನೀರು ಸೇರಿ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಇದರ ಪುನರುಜ್ಜೀವನಕ್ಕೆ ಸಾಮಾಜಿಕ ಕಾರ್ಯಕರ್ತರು, ಸ್ಥಳೀಯರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.ಒತ್ತುವರಿಯನ್ನೂ ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ADVERTISEMENT

ಎಲೆ ಮಲ್ಲಪ್ಪ ಚೆಟ್ಟಿ ಕೆರೆ ಎಂದೂ ಇದನ್ನು ಕರೆಯಲಾಗುತ್ತಿದೆ. ಎಲೆ ವ್ಯಾಪಾರಿಯಾಗಿದ್ದ ರಾಯ್‌ ಬಹಾದ್ದೂರ್‌ ಮಲ್ಲಪ್ಪ ಶೆಟ್ಟಿ ಕೊಡುಗೈ ದಾನಿಯಾಗಿದ್ದರು. 1900ರಲ್ಲಿ ಬರ ಪರಿಸ್ಥಿತಿ ತಲೆದೋರಿದಾಗ ಜನರ ಸಂಕಷ್ಟ ನಿವಾರಿಸಲು ಅವರು ಸ್ವತಃ ದೇಣಿಗೆ ನೀಡಿ ಈ ಕೆರೆ ನಿರ್ಮಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಈ ಕೆರೆಯಲ್ಲಿ ಇತ್ತೀಚೆಗೆ ಮೀನುಗಳು ಸತ್ತಿದ್ದವು. ಕಟ್ಟಡದ ತ್ಯಾಜ್ಯವನ್ನು ಕೆರೆ ಅಂಗಳದಲ್ಲಿ ಸುರಿಯಲಾಗುತ್ತಿದೆ. ಸಮೀಪದಲ್ಲೇ ಕಸ ಸಂಸ್ಕರಣಾ ಘಟಕವೂ ಇದೆ. ಅಲ್ಲಿನ ತ್ಯಾಜ್ಯ ನೀರೂ ಈ ಕೆರೆಗೆ ಹರಿದು ಬರುತ್ತಿದೆ’ ಎಂದು ಕೆರೆ ಉಳಿಸಲು ಹೋರಾಡುತ್ತಿರುವ ಬಾಲಾಜಿ ರಘೋತ್ತಮ್ ಬಾಲಿ ದೂರಿದರು.

‘ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೆರೆಗೆ ಭೇಟಿ ನೀಡಿ, ಇದರ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈ ಪ್ರಸ್ತಾವ ಮೂಲೆಗೆ ಸೇರಿದೆ’ ಎಂದು ಅವರು ಒತ್ತಾಯಿಸಿದರು.

ಈ ಕೆರೆಯ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಜೆ. ಜಗನ್‌ ಕುಮಾರ್‌ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ದೂರು ಸಲ್ಲಿಸಿದ್ದರು.

ಒತ್ತುವರಿ, ತ್ಯಾಜ್ಯ ಸುರಿಯುತ್ತಿರುವುದು ಹಾಗೂ ಸಣ್ಣ ನೀರಾವರಿ ಇಲಾಖೆಯೇ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆಯೇ ಕೆರೆ ಪ್ರದೇಶದಲ್ಲಿ ಜಾಕ್‌ವೆಲ್‌ ಹಾಗೂ ಪಂಪ್‌ಹೌಸ್‌ ನಿರ್ಮಿಸುತ್ತಿರುವ ಅಂಶಗಳನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಜಗನ್‌ ಕುಮಾರ್‌ ದೂರಿನ ಮೇರೆಗೆ, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ, ಪರಿಸರ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ಎನ್‌ಜಿಟಿ ರಚಿಸಿತ್ತು. ಈ ಸಮಿತಿಯು ಅಕ್ಟೋಬರ್‌ 22ರಂದು ಎನ್‌ಜಿಟಿಗೆ ವರದಿ ಸಲ್ಲಿಸಿದೆ. ಸಮಿತಿ ನಿರ್ದೇಶನ ಮೇರೆಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೇ ಕೈಗೊಂಡಿದ್ದರು. ಕೆರೆ ಒಟ್ಟು 508 ಎಕರೆ 16 ಗುಂಟೆಗಳಷ್ಟು ಪ್ರದೇಶ ಹೊಂದಿದೆ ಎಂದು ವಿವರ ನೀಡಿದ್ದರು.

ಸಂಸ್ಕರಣಾ ಘಟಕಗಳಿಂದ ಕೆರೆಗೆ ಹರಿದು ಬರುತ್ತಿರುವ ತ್ಯಾಜ್ಯ ನೀರನ್ನು ತಾತ್ಕಾಲಿಕವಾಗಿ ತಡೆಯಲು 2022ರ ಡಿಸೆಂಬರ್‌ವರೆಗೆ ಹಾಗೂ ಶಾಶ್ವತ ಕ್ರಮ ಕೈಗೊಳ್ಳಲು 2027ರ ಡಿಸೆಂಬರ್‌ವರೆಗೆ ಕಾಲಾವಕಾಶ ಬೇಕು ಎಂದು ಜಲಮಂಡಳಿ ಕೋರಿರುವುದನ್ನು ಹಾಗೂ ಕೆರೆ ಸುತ್ತ ₹5 ಕೋಟಿ ವೆಚ್ಚದಲ್ಲಿ ಬೇಲಿ ನಿರ್ಮಿಸುವ ಪ್ರಸ್ತಾವವನ್ನು ಸಣ್ಣ ನೀರಾವರಿ ಇಲಾಖೆ ಸರ್ಕಾರಕ್ಕೆ ಕಳುಹಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕಡಿಮೆಯಾಗುತ್ತಿದೆ ಆಮ್ಲಜನಕ ಪ್ರಮಾಣ’
ಕೆರೆಯ ನೀರು ಕಲುಷಿತವಾಗಿರುವುದರಿಂದ ಇಲ್ಲಿನ ಜಲಚರಗಳ ಜೀವಕ್ಕೂ ಕುತ್ತು ಬಂದಿದೆ. ಕೆರೆಯ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೀನುಗಳು ಇತ್ತೀಚೆಗೆ ಸತ್ತಿವೆ.

‘ಪ್ರತಿ ಲೀಟರ್‌ ನೀರಿನಲ್ಲಿ ಕರಗಿರುವ ಆಮ್ಲಜನಕ ಪ್ರಮಾಣ 4 ಮಿಲಿ ಗ್ರಾಂ ಇರಬೇಕು. ಆದರೆ, ಈ ಕೆರೆಯಲ್ಲಿ 1.4 ಮಿಲಿ ಗ್ರಾಂ ಮಾತ್ರ ಇದೆ. ಇದರಿಂದ, ಮೀನುಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುತ್ತಿಲ್ಲ. ಹಾಗಾಗಿ ಮೀನುಗಳು ಸಾವಿಗೀಡಾಗಿವೆ’ ಎಂದು ಕೆಎಸ್‌ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಕೆರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿರುವ ಕೆಎಸ್‌ಪಿಸಿಬಿಯು ಈ ಬಗ್ಗೆ ಎನ್‌ಜಿಟಿಗೆ ವರದಿ ಸಲ್ಲಿಸಿದೆ’ ಎಂದೂ ತಿಳಿಸಿದ್ದಾರೆ.

ಜಂಟಿ ಸಮಿತಿಯ ಶಿಫಾರಸುಗಳು

*ಒತ್ತುವರಿ ತೆರವುಗೊಳಿಸಬೇಕು

*ಕೆರೆಯಂಗಳದಲ್ಲಿ ಕಟ್ಟಡ ತ್ಯಾಜ್ಯ ಸುರಿಯುವುದನ್ನು ತಡೆಯುವುದು

*ಕೆರೆಗೆ ಬೇಲಿ ಹಾಕುವುದು

*ಸಂಸ್ಕರಣೆಯಾಗದ ತ್ಯಾಜ್ಯ ನೀರು ಹರಿದು ಬರದಂತೆ ತಡೆಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.