ಬೆಂಗಳೂರು: ಜನ ಸಾಮಾನ್ಯರ ವೇದಿಕೆ ವತಿಯಿಂದ ಅ. 2ರಂದು ಬೀದರ್‌ನಲ್ಲಿ ಪ್ರಾರಂಭಗೊಂಡ ಯುವ ಪರಿವರ್ತನೆ ಯಾತ್ರೆ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕೊನೆಗೊಂಡಿತು.
ಯಾತ್ರೆಯ ಪ್ರಧಾನ ಸಂಚಾಲಕ ಮುಧೋಳ ಯಲ್ಲಪ್ಪ ಹೆಗಡೆ ಮಾತನಾಡಿ, ‘ರಾಜ್ಯದಲ್ಲಿ ಬಿಡಿ ಬಿಡಿಯಾಗಿ ನಡೆಯುತ್ತಿರುವ ರೈತ ಹೋರಾಟಗಳು ಮತ್ತು ಯುವ ಜನರ ಹೋರಾಟಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ. ಆಗ ಮಾತ್ರ ಇಡೀ ಕನ್ನಡನಾಡಿನ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
‘ಇನ್‌ಸೈಟ್ಸ್ ಐಎಎಸ್’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮಾತನಾಡಿ, ‘ನಿರಂತರತೆ ಮಾತ್ರ ಯಾವುದೇ ಚಳವಳಿಯನ್ನು ಯಶಸ್ಸಿನ ಕಡೆ ಕೊಂಡೊಯ್ಯುತ್ತದೆ’ ಎಂದು ತಿಳಿಸಿದರು.
ದ್ರಾವಿಡ ಕನ್ನಡಿಗರು ಸಂಘಟನೆಯ ಮಂಡ್ಯ ಅಬಿ ಒಕ್ಕಲಿಗ ಮಾತನಾಡಿ, ‘ಉತ್ತರ ಕರ್ನಾಟಕ ಜನ ಜೀವನ ದರ್ಶನವಾಗಿ ಈ ಯಾತ್ರೆಯಿಂದ ಮನ ಕಲಕಿದೆ. ಸಮಗ್ರ ಕನ್ನಡನಾಡು ನುಡಿ ಅಭಿವೃದ್ಧಿ ಆಗಬೇಕೆಂದರೆ ಹಳೇ ಮೈಸೂರು ಭಾಗದ ಎಲ್ಲ ವೈಚಾರಿಕ ಹೋರಾಟಗಾರರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲಬೇಕಿದೆ’ ಎಂದರು.
ಜನ ಸಾಮಾನ್ಯರ ವೇದಿಕೆಯ ಶಿವಲಿಂಗ ಬಿದರಿ, ಮನು ವಿಶ್ವಕರ್ಮ, ಶಂಕರ್ ಬಾಗಲಕೋಟೆ, ಲೀಲಾ ಶಿವಮೊಗ್ಗ, ಭೂಮಿಕ ತರಿಕೆರೆ, ಆನಂದ್ ಬೌದ್ಧ ಬೆಂಗಳೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.